ಮನಿಷಾ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಭೀಕರ ಹತ್ಯೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಕಂಪ್ಲಿಯಲ್ಲಿ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಶ್ರೀ ಉದ್ಭವಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ಬೃಹತ್ ಪಂಜಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಕೇಂದ್ರ ಹಾಗೂ ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ, ಹಳೇ ಬಸ್ ನಿಲ್ದಾಣ ಹತ್ತಿರದ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ವಾಲ್ಮೀಕಿ ಸಮುದಾಯದ ಯುವತಿಯ ಅತ್ಯಾಚಾರ ಘಟನೆ ಅತ್ಯಂತ ಅಮಾನವೀಯವಾದದ್ದು. ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರ ಅತ್ಯಾಚಾರ-ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಮೂಲಕ ರಾಮರಾಜ್ಯ ಮಾಡುತ್ತೇವೆ ಎಂದು ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಕ್ಕೆ ಬಂದ ಬಳಿಕ ರಾವಣ ರಾಜ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ಸದಸ್ಯ ಎಚ್. ಮುಹಮ್ಮದ್ ಗೌಸ್ ಮಾತನಾಡಿ, ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತರ ಮೇಲಿನ ದೌರ್ಜನ್ಯ ಮುಗಿಲು ಮುಟ್ಟುತ್ತಿವೆ. ಸಾರ್ವಜನಿಕರನ್ನು ಒಡೆದಾಳುವ ನೀತಿಯನ್ನು ಅನುಸರಿಸುವ ಮೂಲಕ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ತಮ್ಮ ಮಾತನ್ನು ಕೇಳದ ವಿರೋಧ ಪಕ್ಷದವರ ವಿರುದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜ ಗೌಡ ಮಾತನಾಡಿದರು.
ಪಂಜಿನ ಮೆರವಣಿಗೆ ಮತ್ತು ಬೃಹತ್ ಪ್ರತಿಭಟನೆಯಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ತಾಪಂ ಸದಸ್ಯರು, ಜಿಪಂ ಸದಸ್ಯರು, ಪುರಸಭೆ ಸದಸ್ಯರು, ತಾಲೂಕಿನ ವಿವಿಧ ಗ್ರಾಮಗಳ ಪಕ್ಷದ ಮುಖಂಡರು, ಮಹಿಳೆಯರು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here