ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ರೈತರಿಗೆ ನೀರಿನ ಲಭ್ಯತೆ ಅಗತ್ಯವಿದೆ. ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ ಜೋಡನೆಗೂ ಸರ್ಕಾರ ಸಿದ್ದವಿಲ್ಲ. ಮಹದಾಯಿ ಅನುಷ್ಟಾನ ಕೈಗೊಳ್ಳಲು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ರೈತ ಸೇನಾ ಕರ್ನಾಟಕ ಸಮಿತಿ ಮುಖಂಡ ಹನುಮಂತ ಸರನಾಯ್ಕರ್ ಸರ್ಕಾರದ ನೀತಿ ಕುರಿತು ಟೀಕೆ ಮಾಡಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗಾಗಿ ಆಗ್ರಹಿಸಿ ನರಗುಂದದಲ್ಲಿ ರೈತ ಸೇನಾ ಕರ್ನಾಟಕ ಸಮಿತಿಯಿಂದ ನಡೆದ ಧರಣಿ ಗುರುವಾರಕ್ಕೆ 1917 ನೇ ದಿನದಲ್ಲಿ ಮುಂದುವರೆದಿದ್ದು ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೋವಾ ಸರ್ಕಾರದ ಮೊಂಡು ಧೋರಣೆಯಿಂದ ಮಹದಾಯಿ ಅನುಷ್ಟಾನಕ್ಕೆ ಹಿನ್ನಡೆಯಾಗಿದೆ.
ನ್ಯಾಯಮಂಡಳಿ ನೀಡಿರುವ ತೀರ್ಪು ಕರ್ನಾಟಕದ ಪರವಾಗಿದೆ. ಗೆಜೆಟ್ ನೋಟಿಫೀಕೇಶನ್ ಕೇಂದ್ರ ಸರ್ಕಾರ ಹೊರಡಿಸಿದ ನಂತರ ಮತ್ತು ಕರ್ನಾಟಕಕ್ಕೆ ದೊರೆತ 13.42 ಸರ್ಕಾರ ಪುನರ್ ಪರಶೀಲನೆ ಅರ್ಜಿ ಸುಪ್ರೀಂ ಕೋರ್ಟಿಗೆ ಹಾಕಿದ್ದರಿಂದ ಮಹದಾಯಿ ನದಿ ವಿವಾದ ಪುನಹ ವಿಚಾರಣೆ ಹಂತದಲ್ಲಿದೆ. ಕಳೆದ ಆಗಷ್ಟ್‌ನಲ್ಲಿ ಸುಪ್ರೀಂ ಕೋರ್ಟ ಕೊನೆ ಹಂತದ ವಿಚಾರಣೆ ನಡೆಸಬೇಕಾಗಿತ್ತು. ಆದರೆ ಇದನ್ನು ಮುಂದಿನ ವರ್ಷ ಆಗಷ್ಟ್‌ಗೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದ್ದರಿಂದ ಉತ್ತರ ಕರ್ನಾಟಕ ಭಾಗದ ರೈತರು ತೊಂದರೆ ಅನುಭವಿಸಿದ್ದಾರೆ.
ಇದನ್ನು ನೋಡಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹದಾಯಿ ಅನುಷ್ಟಾನದ ಅವಧಿ ಹಾಗೂ ನ್ಯಾಯ ಮಂಡಳಿ ನೀಡಿದ ಅವಧಿಯಲ್ಲಿ ಕಾಮಗಾರಿ ನಡೆಸದೇ ರೈತರನ್ನು ವಂಚಿಸಿದಂತಾಗಿದೆ ಎಂದು ಸರನಾಯ್ಕರ್ ಟೀಕಿಸಿದರು.
ಧರಣಿಯಲ್ಲಿ ರಾಮಪ್ಪ ಸಾಬಳೆ, ಎಸ್.ಬಿ. ಜೋಗಣ್ಣವರ, ಪರಮೇಶಪ್ಪ ಅಣ್ಣಿಗೇರಿ, ಶಿವಪ್ಪ ಸಾತನ್ನವರ, ವೆಂಕಪ್ಪ ಹುಜರತ್ತಿ, ರುದ್ರಗೌಡ ಮುದಿಗೌಡ್ರ, ಅನಸಮ್ಮ ಶಿಂಧೆ, ನಾಗವ್ವ ಹಾಲೊಳ್ಳಿ, ಚನ್ನಪ್ಪಗೌಡ ಪಾಟೀಲ, ಪಾರವ್ವ ದಾನರಡ್ಡಿ ಅನೇಕರು ಭಾಗವಹಿಸಿದ್ದರು.
ಮಹದಾಯಿ ಅನುಷ್ಠಾನದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ
Advertisement