ವಿಜಯಸಾಕ್ಷಿ ಸುದ್ದಿ, ಗದಗ
ಮಹಾರಾಷ್ಟ್ರಕ್ಕೆ ಬೆಳಗಾವಿ ಅಲ್ಲ. ರಾಜ್ಯದ ಒಂದಿಂಚು ಜಾಗ ಬಿಟ್ಟುಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರ ಅಲ್ಲಿನ ಪುಂಡರಿಗೆ ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆ ಖಂಡಿಸಿ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮಾತನಾಡಿದ ಅವರು, ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಹೇಗೆ ನಡೆದುಕೊಳ್ಳುತ್ತಿದೆಯೋ ಆ ರೀತಿ ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಡೆದುಕೊಳ್ಳುತ್ತಿದೆ ಎಂದು ಕಿಡಿ ಕಾಡಿದರು.
ಬೆಳಗಾವಿ ಗಡಿಯೊಳಗೆ ಎಂಇಎಸ್, ಹೊರಗಡೆ ಶಿವಸೇನೆ ಕಿರಿಕ್ ಮಾಡುತ್ತಿವೆ. ಇಂತಹ ಪುಂಡಾಟಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಬೆಳಗಾವಿ, ನಿಪ್ಪಾಣಿ, ಕಾರವಾರ ಅಲ್ಲದೇ, ರಾಜ್ಯದ ಒಂದಿಂಚೂ ಜಾಗ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.
ಕನ್ನಡದ ಗಂಧ ಗಾಳಿ ಇಲ್ಲದವರು, ಕನ್ನಡದ ಬಗ್ಗೆ ಉಡಾಫೆಯಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ನಾಡು, ನುಡಿಗಾಗಿ ಹೋರಾಟಗಳು ಹೆಚ್ಚಾಗಬೇಕು ಎಂದು ಟಿ.ಎ.ನಾರಾಯಣಗೌಡ್ರ ಆಶಿಸಿದರು.