ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಕೊಲೆ ಮಾಡಿರುವ ಘಟನೆ ತಾಲೂಕಿನ ಸಿಂದಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ಯುವಕನನ್ನು 28 ವರ್ಷದ ವೀರೇಶ್ ಬೀಮಳ್ಳಿ ಎಂದು ಗುರುತಿಸಲಾಗಿದೆ.
ವೀರೇಶ್, ಕಲಬುರಗಿ ನಗರದ ದುಬೈ ಕಾಲೋನಿ ನಿವಾಸಿಯಾಗಿದ್ದು, ನಗರದ ಸೂಪರ್ ಮಾರ್ಕೆಟ್ ನಲ್ಲಿನ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ಮುಂಜಾನೆ ಪ್ರತಿದಿನದಂತೆ ವೀರೇಶ್ ತನ್ನ ಕೆಲಸಕ್ಕೆ ಹೋಗಿದ್ದ. ಈ ವೇಳೆ ಆತ ಕೆಲಸ ಮಾಡುವ ಅಂಗಡಿಗೆ ಮೂವರು ಬಂದು ಆತನನ್ನು ಕರೆದುಕೊಂಡು ಹೋಗಿದ್ದರು.

ಬುಧವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ವೀರೇಶನ ಬಗ್ಗೆ ಚೌಕ್ ಠಾಣೆ ಪೊಲೀಸರಿಗೆ ವೀರೇಶನ ಹೆತ್ತವರು ಮಾಹಿತಿ ನೀಡಿದ್ದರು. ಗುರುವಾರ ಸಂಜೆ ವೀರೇಶ್ ಶವ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ವೀರಬಲ್ಲಾಳ ವೀರೇಶನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಗುಂಡಿಯಲ್ಲಿ ಶವ ಹಾಕಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.