*ಅಮೃತಸಿಟಿ ಯೋಜನೆಯಡಿ 1.5 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ
*ಜನರ ಕಣ್ಣಿಗೆ ಮಣ್ಣೆರಚಲು ಸಜ್ಜಾದ ಅಧಿಕಾರಿಗಳು
*ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ: ಸ್ಥಳೀಯರು
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ವಿಶೇಷ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಮೃತಸಿಟಿ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಂಡು ವರ್ಷಗಳೇ ಉರುಳಿದರೂ, ಬಹುತೇಕ ಕಡೆ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಕ್ರಿಯಾ ಯೋಜನೆಯಲ್ಲಿದ್ದಂತೆ ಕಾಮಗಾರಿ ನಡೆಯದೆ ಅಕ್ರಮಕ್ಕೆ ನಗರಸಭೆ ಅಧಿಕಾರಿಗಳು ಆಸ್ಪದ ನೀಡುತ್ತಿದ್ದಾರೆ ಎಂದು ಅವಳಿ ನಗರದ ಜನತೆ ಆರೋಪಿಸುತ್ತಿದ್ದಾರೆ.
ನಗರದ ಹಾತಲಗೇರಿ ನಾಕಾದಲ್ಲಿ ಬರುವ ರಾಜ ಕಾಲುವೆಗೆ ಸುಮಾರು 3-4 ಕಿ.ಮೀ. ವ್ಯಾಪ್ತಿಯ ಪ್ರದೇಶದಿಂದ ನೀರು ಹರಿದು ಬರುತ್ತಿದೆ. ಹಾಗಾಗಿ ಕೊಳಚೆ ನೀರು ಹೊರ ಹಾಕಲು ರಾಜಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ರಾಜಕಾಲುವೆಯ ಮೂರು ಪಟ್ಟು ಜಾಗವನ್ನು ಮುಚ್ಚಿ ನಾಲ್ಕನೇ ಭಾಗದಷ್ಟು ಮಾತ್ರ ಕಾಲುವೆ ಕೆಲಸ ಮಾಡಲಾಗುತ್ತಿದೆ. ಬಹುತೇಕ ನಗರಸಭೆ ಜಾಗೆ ಒತ್ತುವರಿಯಾಗಿದ್ದು, ಮತ್ತಷ್ಟು ಜಾಗೆ ಒತ್ತುವರಿಗೆ ನಗರಸಭೆ ಅವಕಾಶ ಕಲ್ಪಿಸಿಕೊಟ್ಟಿದೆ.
10 ಅಡಿ ಕಾಲುವೆ: ಹಾತಲಗೇರಿ ನಾಕಾದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ ಕಣಗಿನಹಾಳ ರಸ್ತೆಯವರೆಗೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಒಟ್ಟು 831 ಮೀ. ಉದ್ಧದ ರಾಜಕಾಲುವೆ ದುರಸ್ತಿಗೊಳಿಸಲಾಗುತ್ತಿದೆ. ಆದರೆ, ಒಟ್ಟು 40 ಅಡಿ ಅಗಲದ ರಾಜಕಾಲುವೆಯಲ್ಲಿ ಕೇವಲ 10 ಅಡಿ ಕಾಲುವೆಯನ್ನು ಮಾತ್ರ ನಿರ್ಮಿಸಲಾಗುತ್ತಿದೆ. ಇನ್ನುಳಿದ 30 ಅಡಿ ಜಾಗವನ್ನು ಖಾಲಿ ಬಿಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇವಲ 831 ಅಡಿ ಉದ್ದ ಮತ್ತು 10 ಅಡಿ ಅಗಲದ ಕಾಲುವೆ ಕಾಮಗಾರಿಯಲ್ಲಿ ದುಡ್ಡು ಲಪಟಾಯಿಸುವ ಹುನ್ನಾರ ಅಡಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಸಮಸ್ಯೆ: ನಗರದ ರಾಜೀವ್ ಗಾಂಧಿ, ಹುಡ್ಕೋ ಕಾಲನಿ, ಸಾಯಿಬಾಬಾ ದೇವಸ್ಥಾನದಿಂದ ನೀರು ಹರಿದು ಬರುತ್ತಿದೆ. ಮಳೆಗಾಲದಲ್ಲಿ ಇಡೀ ರಾಜಕಾಲುವೆ ಭರ್ತಿಯಾಗಿ ಹರಿಯುವುದರಿಂದ ಪಕ್ಕದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಕಾಲುವೆ ತುಂಬಿ ರಸ್ತೆ ಮೇಲೆಲ್ಲ ನೀರು ಹರಿಯುವುದರಿಂದ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ಇದರಿಂದ ಕಳೆದ ವರ್ಷ ಓರ್ವ ವ್ಯಕ್ತಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಲ್ಲದೆ, ವಾಹನಗಳು ನೀರಿನ ರಭಸಕ್ಕೆ ಹರಿದು ಹೋಗಿದ್ದವು. ಹೀಗೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಿದೆ. ಹಾಗಾಗಿ ಇಂತಹ ದುರಂತಗಳನ್ನು ತಪ್ಪಿಸಲು ಅಮೃತಸಿಟಿ ಯೋಜನೆಯಡಿ ರಾಜಕಾಲುವೆ ನಿರ್ಮಿಸಲಾಗುತ್ತಿದ್ದು, ಈ ಯೋಜನೆ ಕೇವಲ ನೆಪ ಮಾತ್ರಕ್ಕೆ ಎನ್ನುವಂತಾಗಿದೆ.
ಅಧಿಕಾರಿಗಳ ಸಮರ್ಥನೆ: ಮುಳ್ಳು ಕಂಟಿಗಳು ತುಂಬಿ ಪ್ರವಾಹ ಬರುತ್ತಿದ್ದು, ನೀರು ಸರಾಗವಾಗಿ ಹೋಗುವುದಕ್ಕೆ 10 ಅಡಿ ಅಗಲದ ಕಾಲುವೆ ಸಾಕಾಗುತ್ತದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಂದೆ ಸಂಭವಿಸಬಹುದಾದ ದುರಂತಗಳಿಗೆ ಮುಂಚಿತವಾಗಿಯೇ ದೀರ್ಘಕಾಲದ ಪರಿಹಾರ ಕಂಡುಕೊಂಡರೆ ಸದ್ಯದ ರಾಜಕಾಲುವೆ ಮಾಡುತ್ತಿರುವುದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಕೋಟಿಗಟ್ಟಲೆ ಹಣ ವ್ಯಯಿಸಿ ಜನರ ಕಣ್ಣಿಗೆ ಮಣ್ಣೆರೆಚಿದಂತಾಗುತ್ತದೆ ಎಂದು ನಗರದ ಜನರು ದೂರುತ್ತಿದ್ದಾರೆ.
ಭೂಗಳ್ಳರಿಗೆ ಅನುಕೂಲ?: ರಾಜಕಾಲುವೆ ಸಂಕುಚಿತಗೊಳಿಸಿರುವುದರಿಂದ ಸರ್ಕಾರಿ ಜಾಗೆ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದ್ದು, ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಸಂಶಯ ವ್ಯಕ್ತವಾಗುತ್ತಿದೆ. ಹೈಕೋರ್ಟ್ ನಿಯಮ ಮೀರಿ ರಾಜಕಾಲುವೆ ದುರಸ್ತಿಗೆ ಗುತ್ತಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಮೊದಲಿನಷ್ಟೇ ಅಗಲ ಇರಲಿ
ಮಳೆಗಾಲದಲ್ಲಿ ರಾಜಕಾಲುವೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಮೊದಲಿನ ಅಳತೆಯಂತೆ ಕಾಲುವೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಎಸ್.ಎಂ. ಅಂಗಡಿ, ಸ್ಥಳೀಯರು
40 ಅಡಿ ಕಾಲುವೆ ಇಲ್ಲ
ಚರಂಡಿ ಇಲ್ಲದಿದ್ದ ಕಾರಣ ನೀರು ಸರಾಗವಾಗಿ ಹರಿಯಲಾಗದೆ ಒಂದೆಡೆ ನಿಲ್ಲುತ್ತಿತ್ತು. ಇದರಿಂದ ನೀರು ಅಗಲವಾಗುತ್ತಿತ್ತು. ಇಲ್ಲಿ 40 ಅಡಿ ಅಗಲದ ರಾಜ ಕಾಲುವೆ ಇಲ್ಲ. ಅಲ್ಲದೆ, ಇದು ಸರ್ಕಾರದಿಂದ ಅನುಮೋದಿತಗೊಂಡಿದೆ. ಸದ್ಯ ನಿರ್ಮಾಣವಾಗುತ್ತಿರುವ ಕಾಲುವೆಯಲ್ಲಿ ಮೊದಲಿಗಿಂತ ಒಂದೂವರೆ ಪಟ್ಟು ಹೆಚ್ಚು ನೀರು ಹೋಗುತ್ತದೆ. ಒಂದು ವೇಳೆ ರಾಜಕಾಲುವೆ ಅತಿಕ್ರಮಣವಾಗಿದ್ದರೆ ತೆರವುಗೊಳಿಸುತ್ತೇವೆ. ರಮೇಶ್ ಜಾಧವ, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ