ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಇಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ಪಂದ್ಯ ನಡೆಯಲಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಮೂರು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.
ರಾಹುಲ್ ಪಂಜಾಬ್ ತಂಡದ ನಾಯಕ, ಇನ್ನಿಂಗ್ಸ್ ಆರಂಭಿಕ ಆಟಗಾರ ಮತ್ತು ವಿಕೆಟ್ ಕೀಪರ್ ಆಗಿ ಆಡಲಿದ್ದು, ಇದನ್ನು ಅವರು ಸವಾಲಾಗಿ ಸ್ವೀಕರಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಬೇರೆ ಯಾರೂ ಈ ತರಹದ ಮೂರು ಪ್ರಮುಖ ಪಾತ್ರಗಳನ್ನು ಪಡೆದಿಲ್ಲ.
ತಂಡದ ಕೋಚ್ ಕರ್ನಾಟಕದವರೇ ಆದ ಅನಿಲ್ ಕುಂಬ್ಳೆಗೆ ರಾಹುಲ್ ಸಾಮರ್ಥ್ಯದ ಬಗ್ಗೆ ಸಾಕಷ್ಟು ವಿಶ್ವಾಸವಿದೆ. ‘ನಾನು ಹತ್ತಾರು ವರ್ಷಗಳಿಂದ ಕೆ.ಎಲ್(ರಾಹುಲ್) ಬಲ್ಲೆ. ವಹಿಸಿದ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಲು ಆತ ಯತ್ನಿಸುತ್ತಾರೆ. ಸದಾ ಪಾಸಿಟಿವ್ ಅಟಿಟ್ಯೂಡ್ ಇರುವ ವ್ಯಕ್ತಿ’ ಎಂದು ಕುಂಬ್ಳೆ ತಮ್ಮ ತಂಡದ ನಾಯಕನ ಬಗ್ಗೆ ಹೇಳಿದ್ದಾರೆ.
ಕಾಮೆಂಟ್‌ರೆಟರ್ ಇರ್ಫಾನ್ ಪಠಾಣ್ ಕೂಡ, ರಾಹುಲ್ ಮೂರೂ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂದಿದ್ದಾರೆ. ‘ಟ್ಟೆಂಟಿ-20 ಬ್ಯಾಟಿಂಗ್ ವಿಷಯಕ್ಕೆ ಬಂದರೆ, ಕೊಹ್ಲಿಗಿಂತ ರಾಹುಲ್ ಅತ್ಯುತ್ತಮ ಬ್ಯಾಟ್ಸ್ಮನ್. ಸಂದರ್ಭಗಳಿಗೆ ತಕ್ಕಂತೆ ಆಟವನ್ನು ರಾಹುಲ್ ರೂಪಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಇರ್ಫಾನ್ ಪಠಾಣ್.
ಅಂದಂತೆ, ಪಂಜಾಬ್ ತಂಡದಲ್ಲಿ ಇನ್ನೂ ಮೂವರು ಕನ್ನಡಿಗರು ಇದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕರುಣ್ ನಾಯರ್, ಆಲ್‌ರೌಂಡರ್‌ಗಳಾದ ಕೆ. ಗೌತಮ್ ಮತ್ತು ಜೆ. ಸುಚಿತ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಈ ಮೂವರಲ್ಲಿ ಇಂದು ಯಾರ‍್ಯಾರಿಗೆ ಆಡುವ ಅವಕಾಶ ಸಿಗುತ್ತದೆಯೋ ನೋಡಬೇಕು.