ವಿಜಯಸಾಕ್ಷಿ ಸುದ್ದಿ, ಗದಗ
ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ಅನ್ನದಾತರನ್ನು ಕಡೆಗಣಿಸಲಾಗಿದೆ.
ರೈತರ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ ಎಂದು ಶಾಸಕ ಎಚ್.ಕೆ.ಪಾಟೀಲ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದ ಕೆ.ಎಚ್.ಪಾಟೀಲ್ ಕ್ರೀಡಾಂಗಣದಲ್ಲಿ ರೈತರ ಟ್ರ್ಯಾಕ್ಟರ್ ಪರೇಡ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಸರಕಾರಗಳು ರೈತರನ್ನ ಕಡೆಗಣಿಸುತ್ತಿವೆ.
ರೈತರ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಸರ್ಕಾರ ರೈತರ ಹಿತಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ ಎಂದರು.
ರೈತರು ಟ್ರ್ಯಾಕ್ಟರ್ ರ‌್ಯಾಲಿ ಬಗ್ಗೆ ತಿಂಗಳಿನಿಂದ ತಿಳಿಸುತ್ತಾ ಬಂದಿದ್ದಾರೆ. ಇಂದು ರೈತರ ಪ್ರಯತ್ನಕ್ಕೆ ಅಡ್ಡಿಪಡಿಸುವ ಮೂಲಕ ಗಣರಾಜ್ಯೋತ್ಸವದ ಮಹತ್ವ ಹಾಗೂ ಘನತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದರು.
ರೈತರ ಹೋರಾಟಕ್ಕೆ ಎಲ್ಲ ಪಕ್ಷದವರ ಬೆಂಬಲವೂ ಇದೆ. ಕಾಂಗ್ರೆಸ್ ಕೂಡ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.