ಲಾರಿ ಚಾಲಕರ ಮೇಲಿನ ಹಲ್ಲೆ ಪ್ರಕರಣ, ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ: ನಾಲ್ವರು ದರೋಡೆಕೋರರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಲಾರಿ ಚಾಲಕರ ನಿದ್ದೆಗೆಡಿಸಿದ್ದ ನಾಲ್ಕು ಜನ ದರೋಡೆಕೋರರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಭರ್ಜರಿ ಬೇಟೆಯಾಡಿದ್ದಾರೆ.

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮೋಡಿಕೇರ, ಲಕ್ಷ್ಮಣ ಮೋಡಿಕೇರ, ದುರಗಪ್ಪ ಮೋಡಿಕೇರ, ಶಿವಾಜಿ ಮೋಡಿಕೇರ ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸರು ಬಂಧಿತರಿಂದ ಕಬ್ಬಿಣದ ರಾಡ್‌ಗಳು, ಖಾರದ ಪುಡಿ, ಖಾಲಿ ಬಾಟಲಿಗಳು, ಹಗ್ಗ ಹಾಗೂ ಸಣ್ಣ ಕಂದಲಿಯನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಈ ನಾಲ್ವರು ಖದೀಮರು ಕಳೆದ ಒಂದು ವಾರದಿಂದ ಲಾರಿಗಳ ಚಾಲಕರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ದೊಚುತ್ತಿದ್ದರು. ಡಿ.25 ರಂದು ಗದಗ ಗ್ರಾಮೀಣ ಹಾಗೂ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿತ ಆರೋಪಿತರು ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

ಪ್ರಕರಣ ಭೇದಿಸುವ ಸಲುವಾಗಿ ಡಿಎಸ್‌ಪಿ, ಸಿಪಿಐ ಗದಗ ಗ್ರಾಮೀಣ, ಸಿಪಿಐ ಗದಗ ಶಹರ, ಸಿಪಿಐ ಶಿರಹಟ್ಟಿ ವೃತ್ತ ಇವರ ನೇತೃತ್ವದಲ್ಲಿ ವಿಶೇಷ ಗಸ್ತು ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಸೋಮವಾರ(ಡಿ.28) ರಾತ್ರಿ ನಗರದ ಲಕ್ಷೇಶ್ವರ ರಸ್ತೆಯ ರಾಧಾಕೃಷ್ಣನ್ ನಗರ ಕ್ರಾಸ್ ಸಮೀಪ ನಿಂತಿದ್ದ ದರೋಡೆಕೋರರಿಗೆ ವಿಶೇಷ ಗಸ್ತು ಕರ್ತವ್ಯದಲ್ಲಿದ್ದ ಗದಗ ಗ್ರಾಮೀಣ ಪಿಎಸ್‌ಐ ಅಜಿತ್‌ಕುಮಾರ್ ಹೊಸಮನಿ ನೇತೃತ್ವದ ತಂಡ ಕೈಗೆ ಕೋಳ ತೊಡಿಸಿದೆ. ಇವರಲ್ಲದೇ ಇನ್ನೂ ನಾಲ್ಕು ಜನ ಆರೋಪಿತರಿದ್ದು, ಬಂಧಿಸುವ ವೇಳೆ ಬೊಲೇರೋ ವಾಹನ ಸಮೇತ ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ತನಿಖಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಡಿಎಸ್‌ಪಿ ಎಸ್.ಕೆ.ಪ್ರಹ್ಲಾದ, ಗದಗ ಗ್ರಾಮೀಣ ಸಿಪಿಐ ಆರ್.ಎಸ್.ಕಪ್ಪತನವರ, ಗದಗ ಶಹರ ಸಿಪಿಐ ಪಿ.ವಿ.ಸಾಲಿಮಠ, ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ, ಪಿಇಎನ್ ಠಾಣೆಯ ಮಹಾಂತೇಶ ಪಿ.ಐ., ಪಿಎಸ್‌ಐ ಸುನೀಲ್ ನಾಯಕ, ಸಿಬ್ಬಂದಿಗಳಾದ ಆರ್.ಪಿ.ಹಿರೇಮಠ, ಪಿ.ಎಸ್.ಗಾಣಿಗೇರ, ಎಂ.ರಂಗರೇಜ್, ಡಿ.ಎಸ್.ನದಾಫ್, ಗಣೇಶ್ ಗ್ರಾಮ ಪುರೋಹಿತ, ಗಂಗಾಧರ ಕರಲಿಂಗಣ್ಣವರ, ಪಿ.ಎಸ್.ಶೆಟ್ಟೆಣ್ಣವರ, ಎಸ್.ಎ.ಗುಡ್ಡಿಮಠ, ಎ.ಪಿ.ದೊಡ್ಡಮನಿ, ಎಂ.ವಿ.ಹೂವಣ್ಣ ಸೇರಿದಂತೆ ಸಿಬ್ಬಮದಿಗಳ ಕರ್ತವ್ಯವನ್ನು ಎಸ್‌ಪಿ ಯತೀಶ್ ಎನ್. ಶ್ಲಾಘಿಸಿದರು.

ಜೈಲು ವಾಸ ಅನುಭವಿಸಿದ್ದ ಆರೋಪಿಗಳು

ಈ ನಾಲವ್ರು ಆರೋಪಿಗಳು ಕಳೆದ ಜುಲೈನಲ್ಲಿ ಪೊಲೀಸರು, ವಾಚ್‌ಮನ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದರು, ಈ ವೇಳೆ ಸಿಕ್ಕಿಹಾಕಿಕೊಂಡು ಜೈಲು ವಾಸ ಅನುಭವಿಸುತ್ತಿದ್ದರು. ಕಳೆದ ಹನ್ನೆರಡು ದಿನಗಳ ಹಿಂದಷ್ಟೇ (ಡಿ.17) ಜಾಮೀನು ಮೇಲೆ ಹೊರ ಬಂದಿದ್ದರು. ಜೈಲಿನಿಂದ ಹೊರ ಬರುತ್ತಿದ್ದಂತೆ ಆರೋಪಿಗಳು ತಮ್ಮ ಹಳೇ ಚಾಳಿ ಮುಂದುವರೆಸಿದ್ದರು. ಇನ್ನು ಆರೋಪಿತರು ಕ್ಲರ್ಕ್ ಇನ್ ಹೋಟೆಲ್, ಪಾರ್ಶ್ವನಾಥ ಶಾಲೆ ಬಳಿ, ಶಿರಹಟ್ಟಿ ಪಟ್ಟಣದಲ್ಲೂ ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here