34.4 C
Gadag
Tuesday, March 28, 2023

ವಾಹನ ನಿಲುಗಡೆ ಪಟ್ಟಿ ಅಳವಡಿಕೆ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ
ಪಟ್ಟಣದಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಇಲಾಖೆಯ ಜತೆಗೆ ಸಹಕರಿಸಬೇಕು ಎಂದು ಪಿಎಸ್‌ಐ ಗುರುಶಾಂತ ದಾಶ್ಯಾಳ ಹೇಳಿದರು.
ಸ್ಥಳೀಯ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಅಂಬೇಡ್ಕರ್ ವೃತ್ತ, ದುರ್ಗಾ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ಹಿನ್ನೆಲೆಯಲ್ಲಿ ವಾಹನ ನಿಲುಗಡೆ ಪಟ್ಟಿ ಹಾಗೂ ಪಟ್ಟಣದ 14ಕ್ಕೂ ಅಧಿಕ ಪ್ರಮುಖ ಸ್ಥಳಗಳಲ್ಲಿ ಅಳವಡಿಸುತ್ತಿರುವ ಸಿಸಿಟಿವಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವುದರ ಜತೆಗೆ ವಾಹನಗಳ ಸುಗಮ ಸಂಚಾರ, ಪಾದಚಾರಿಗಳಿಗೆ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಪುರಸಭೆಯ ಸಹಕಾರದಲ್ಲಿ ಪ್ರಮುಖ ರಸ್ತೆ, ವೃತ್ತ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ. ವಾಹನಗಳ ಅವ್ಯವಸ್ಥಿತ ನಿಲುಗಡೆ ಕುರಿತು ಇಲಾಖೆಯ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಮತ್ತು ವಾಹನ ನಿಲುಗಡೆಯ ಪಟ್ಟಿಗಳನ್ನು ಹಾಕಲಾಗುತ್ತಿದೆ. ಮುಂದೆ ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಗಜೇಂದ್ರಗಡ ದೊಡ್ಡ ಪಟ್ಟಣವಾಗಿ ಬೆಳೆಯುತ್ತಿದೆ. ಪ್ರತಿನಿತ್ಯ ಪಟ್ಟಣಕ್ಕೆ ವ್ಯಾಪಾರ- ವಹಿವಾಟಿಗಾಗಿ ಆಗಮಿಸುವ ನೆರೆಯ ತಾಲೂಕಿನ ಗ್ರಾಮಸ್ಥರು ಹಾಗೂ ಪಟ್ಟಣದ ನಿವಾಸಿಗಳು ಕೆಲವು ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಾಹನ ದಟ್ಟಣೆ ಹಾಗೂ ರಸ್ತೆ ಮಧ್ಯದಲ್ಲಿ ವ್ಯಾಪಾರ ವಹಿವಾಟು ನಡೆಸುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ಇಲ್ಲಿನ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಸಂಚಾರಿ ನಿಯಮಗಳ ಪಟ್ಟಿಯನ್ನು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ವಿವಿಧೆಡೆ 90ಕ್ಕೂ ಅಧಿಕ ಸಿಸಿ ಟಿವಿಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಪುರಸಭೆ ಆರೋಗ್ಯ ಸಹಾಯಕ ರಾಘವೇಂದ್ರ ಮಂತಾ, ಕಿರಿಯ ಆರೋಗ್ಯ ನೀರಿಕ್ಷಕ ಶಿವು ಇಲಾಳ, ಶರಣಪ್ಪ ಭಜಂತ್ರಿ, ಹನಮಂತ ಚಲವಾದಿ, ಮಾರುತಿ ನಂದಾಪುರ ಇದ್ದರು.
 


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,749FollowersFollow
0SubscribersSubscribe
- Advertisement -spot_img

Latest Posts

error: Content is protected !!