*ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಶಾಸಕ ದಡೇಸೂಗೂರು; ಗುಳದಾಳ (ಮಸಾರಿ ಕ್ಯಾಂಪ್) ಗ್ರಾಮಕ್ಕೆ ಬೆಳಕಾದ ಭರವಸೆ
–ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕೊಪ್ಪಳ:“ರಸ್ತೆ ಮಾಡಿ ಕೊಡಿ, ಆಮೇಲೆ ಓಟ್ ಕೇಳೋಕೆ ಬನ್ನಿ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಸೆಪ್ಟೆಂಬರ್ 29 ರಂದು ಪ್ರಕಟಿಸಿದ್ದ ವಿಜಯಸಾಕ್ಷಿ ವಿಶೇಷ ವರದಿಯಿಂದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಗ್ರಾಮಕ್ಕೆ ಈಗ ರಸ್ತೆ ಭಾಗ್ಯ, ವಿದ್ಯುತ್ ಭಾಗ್ಯ ಒದಗಿ ಬಂದಿದ್ದು, ಇದು ವಿಜಯಸಾಕ್ಷಿ ಸ್ಪೆಷಲ್ ರಿಪೋರ್ಟ್‌ನ ಬಿಗ್ ಇಂಪ್ಯಾಕ್ಟ್.
ಹೌದು.. ಜಿಲ್ಲೆಯ ಗಂಗಾವತಿ
ತಾಲೂಕಿನ ಮಸಾರಿಕ್ಯಾಂಪ್ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೇ ಅಲ್ಲಿನ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಸವಿಸ್ತಾರವಾದ ವರದಿಯನ್ನು ವಿಜಯಸಾಕ್ಷಿ ಪ್ರಕಟಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಕ್ಷಣ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸಿ ಪರಿಹರಿಸಲು ಸೂಚಿಸಿದ್ದರು.
ಅವರ ಸೂಚನೆ ಮೇರೆಗೆ ಗಂಗಾವತಿ ತಹಶೀಲ್ದಾರ ಎಂ. ರೇಣುಕಾ , ತಾಲೂಕ ಪಂಚಾಯತ್ ಇಒ ಡಾ. ಮೋಹನ್, ಬಿಇಓ ಸೋಮಶೇಖರ್ ಗೌಡ ಅವರು ಬುಧವಾರ ಗುಳದಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಕಲ್ಪಿಸಲು ಇರುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಈ ತಂಡ ಸ್ಥಳಕ್ಕೆ ಭೇಟಿ ನೀಡಿತು.
ಮಸಾರಿಕ್ಯಾಂಪ್ (ಗುಳದಳ್ಳಿ) ಗ್ರಾಮಕ್ಕೆ ತುಂಗಭದ್ರಾ ಎಡದಂಡೆ ಕಾಲುವೆ ಮೇಲಿರುವ ರಸ್ತೆಯ ಮೂಲಕ ಮಾತ್ರ ಗ್ರಾಮಕ್ಕೆ ಪ್ರವೇಶಿಸಲು ಸಾಧ್ಯವಿದೆ. ಅದನ್ನು ಬಿಟ್ಟರೆ ಗ್ರಾಮಕ್ಕೆ ಬೇರೆ ದಾರಿಯಿಲ್ಲ. ಮಳೆಗಾಲ ಬಂದರೆ ಕಾಲುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿ ನಡೆದಾಡಲು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಜನರು ಬಹುತೇಕ ಬಾಹ್ಯ ಸಂಪರ್ಕ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಇರುವ ಸಾಧ್ಯತೆಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಾಗಿ ತಂಡ ತಿಳಿಸಿತು.
ಈ ಬಗ್ಗೆ ಜಿಲ್ಲಾಧಿಕಾರಿಗಳ ಸೂಚನೆ ಅನುಸಾರ ನಾವೆಲ್ಲರೂ ಸಹ ಬಂದಿದ್ದೇವೆ. ಇನ್ನು ಈ ಬಗ್ಗೆ ಶಾಸಕರು ಸಹ ಮಾಹಿತಿ ನೀಡಿದ್ದು, ಪಿಎಂಜಿಎಸ್ವೈ ( ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ) ರಸ್ತೆಯನ್ನು ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕನಕಗಿರಿ ಶಾಸಕರು ಸಲ್ಲಿಸಿದ್ದಾರೆ. ಅನುಮೋದನೆ ಸಿಕ್ಕ ತಕ್ಷಣ ರಸ್ತೆ ನಿರ್ಮಾಣವಾಗುತ್ತೆ. ಗ್ರಾಮಸ್ಥರು ಆತಂಕಪಡುವ ಪ್ರಶ್ನೆ ಇಲ್ಲ..
-ಡಾ.ಮೋಹನ್ , ಇಒ ತಾಲೂಕ ಪಂಚಾಯತ್ ಗಂಗಾವತಿ.
ವಿಜಯಸಾಕ್ಷಿ ವರದಿ ನನ್ನ ಗಮನಕ್ಕೆ ಬಂದಿದೆ. ಈ ಹಿಂದೆಯೂ ನನ್ನ ಕ್ಷೇತ್ರದ ಜನರು ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳ ಬಳಿ ಚರ್ಚೆ ಮಾಡಿ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಹೇಳಿದ್ದೇನೆ. ಕಾಮಗಾರಿ ಅನುಮೋದನೆ ಸಿಕ್ಕ ತಕ್ಷಣವೇ ರಸ್ತೆ ನಿರ್ಮಾಣ ಮಾಡಲಾಗುವುದು ಗುಳದಾಳ ಜನರ ಜೊತೆ ನಾನೀದ್ದೇನೆ ಯೋಚನೆ ಬೇಡ.
-ಬಸವರಾಜ ದಡೇಸೂಗೂರು, ಕನಕಗಿರಿ ಶಾಸಕ.