ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕೈಯಲ್ಲಿದ್ದ ಕಬ್ಬಿಣದ ಪೈಪ್ ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕುರ್ತಕೋಟಿ ಅಸುಂಡಿ ರಸ್ತೆಯಲ್ಲಿರುವ ಎಂಪ್ಲಸ್ ಕೆ.ಎನ್.ಸೋಲಾರ್ ಪ್ರೈವೇಟ್ ಲಿಮಿಟೆಡ್ ಸೈಟಿನಲ್ಲಿ ನಡೆದಿದೆ.
ಮೃತಪಟ್ಟಿರುವ ವ್ಯಕ್ತಿ ಕುರ್ತಕೋಟಿ ಗ್ರಾಮದ ಕರಿಯಪ್ಪ ರೇವಣಪ್ಪ ಭಾಗವಾಡ ಎಂದು ಗುರುತಿಸಲಾಗಿದೆ. ಮೃತನು ಸೋಲಾರ್ ಪ್ಲೇಟ್ ಮಾಡಲ್ ಕ್ಲೀನಿಂಗ್ ಕೆಲಸಗಾರನಾಗಿದ್ದನು.
ಸೋಲಾರ್ ಪ್ಲ್ಯಾಂಟ್ ನ ಕೆಲಸಗಾರರ ಬಗ್ಗೆ ಯಾವುದೇ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೇ, ಕ್ಲೀನಿಂಗ್ ಕರಿಯಪ್ಪನ ಕೈಯಲ್ಲಿ ಕಬ್ಬಿಣದ ಪೈಪ್ ಕೊಟ್ಟು ಕೆಲಸಕ್ಕೆ ಕಳುಹಿಸಿದ ಸೋಲಾರ್ ಪ್ಲ್ಯಾಂಟ್ ಸೂಪರ್ವೈಸರ್ ದಾದಾಪೀರ, ಸೇಫ್ಟಿ ಇನ್ಚಾರ್ಜ್ ಹಾಗೂ ಸೈಟ್ ಜವಾಬ್ದಾರಿ ಹೊಂದಿರುವ ಸುರೇಶ ಮತ್ತು ಕಾರ್ತಿಕರೆಡ್ಡಿ ಅವರಿಗೆ ಕೆಲಸಗಾರರ ಬಗೆಗಿನ ನಿರ್ಲಕ್ಷತನವೇ ಕಾರಣ ಎಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪಿಎಸ್ಐ ಅಜಿತ್ ಕುಮಾರ ಹೊಸಮನಿ ತಿಳಿಸಿದ್ದಾರೆ.
ಘಟನೆಯ ವಿವರ: ಕ್ಲೀನಿಂಗ್ ಕರಿಯಪ್ಪ ನ.24 ರಂದು ಸೋಲಾರ್ ಪ್ಲ್ಯಾಂಟಿಗೆ ಕೆಲಸಕ್ಕೆ ಹೋಗಿದ್ದನು. ಸೋಲಾರ್ ಪ್ಲ್ಯಾಂಟಿನ ಗೇಟ್ ಮುಂದೆ ವಿದ್ಯುತ್ ಕಂಬಗಳಿದ್ದು, ವಿದ್ಯುತ್ ತಂತಿ ಹಾದಿವೆ. ಸೋಲಾರ್ ಪ್ಲೇಟ್ ಸ್ವಚ್ಛ ಮಾಡುವ ಉದ್ದನೆಯ ಕಬ್ಬಿಣದ ಪೈಪ್ ಕೊಟ್ಟು ಗೇಟ್ ಒಳಗೆ ಕೆಲಸಕ್ಕೆ ಕಳುಹಿಸಿದ್ದಾರೆ. ಈ ವೇಳೆ ಅಲ್ಲೇ ಗೇಟ್ ಮುಂದೆ ಹಾದಿರುವ ವಿದ್ಯುತ್ ತಂತಿಗೆ ಪೈಪ್ ತಗುಲಿ ವಿದ್ಯುತ್ ಸ್ಪರ್ಶಿಸಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ತಕ್ಷಣ ಚಿಕಿತ್ಸೆಗಾಗಿ ಹುಲಕೋಟಿಯ ಆರ್.ಎಂ.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿನ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.