21.4 C
Gadag
Wednesday, September 27, 2023

‘ವೀರಶೈವ-ಲಿಂಗಾಯತ’ ಪ್ರಮಾಣಪತ್ರಕ್ಕೆ ತೀವ್ರ ವಿರೋಧ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ನಗರದ ಬಸವಪರ ಸಂಘಟನೆಗಳು `ವೀರಶೈವ ಲಿಂಗಾಯತ’ ದ ಬದಲು ಹಿಂದಿದ್ದಂತೆ`ಲಿಂಗಾಯತ’ ಎಂದು ಜಾತಿ ಪ್ರಮಾಣ ಪತ್ರ ನೀಡಲು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿವೆ.

2002ಕ್ಕಿಂತ ಪೂರ್ವದಲ್ಲಿ`ಲಿಂಗಾಯತ’ ಎಂದಿತ್ತು. ಆದರೆ ಹಲವು ಮನುವಾದಿ ಕುತಂತ್ರಿಗಳ ಸಂಚಿನ ಫಲವಾಗಿ ಏಕಾಏಕಿ, ಯಾರ ಒತ್ತಾಯವಿರದಿದ್ದರೂ, ಯಾರನ್ನು ಕೇಳದೇ `ವೀರಶೈವ-ಲಿಂಗಾಯತ’ ಎಂದು ಬದಲಾವಣೆ ಮಾಡಲಾಯಿತು. ಇದು ಸಂವಿಧಾನಬಾಹಿರ ಕೃತ್ಯವಾಗಿದೆ. ಈ ದೇಶದ ಸಂವಿಧಾನದ ಪ್ರಕಾರ ಜಾತಿ, ಧರ್ಮಗಳ ಆಚರಣೆಯು ಆಯಾ ವ್ಯಕ್ತಿಯ ವೈಯಕ್ತಿಕ  ಹಕ್ಕಾಗಿರುತ್ತದೆ. ಈ ಜಾತಿ ತಿದ್ದುಪಡಿಯನ್ನು ವಿಧಾನಸಭೆಯಲ್ಲಾಗಲಿ, ವಿಧಾನ ಪರಿಷತ್ತಿನಲ್ಲಾಗಲಿ ಚರ್ಚಿಸದೇ ಬದಲಾಯಿಸಿದ್ದು ಕೂಡಾ ಅಸಂವಿಧಾನಿಕವಾದುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

2002ರಲ್ಲಿ ಹಠಾತ್ತನೇ ತಂತ್ರಾಂಶದಲ್ಲಿ ಬದಲಾವಣೆ ಮಾಡಿ`ವೀರಶೈವ-ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಇದು ಲಿಂಗಾಯತರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಎಲ್ಲ ಜಾತಿಯವರು ಅವರವರ ಜಾತಿ ಪ್ರಮಾಣಪತ್ರ ಪಡೆಯುತ್ತಿರುವಾಗ ಲಿಂಗಾಯತರು ಮಾತ್ರ ತಮ್ಮದಲ್ಲದ, ತಮ್ಮ ಇಚ್ಛೆಗೆ ವಿರೋಧವಾದ ‘ವೀರಶೈವ ಲಿಂಗಾಯತ’ ಪ್ರಮಾಣಪತ್ರ ಪಡೆಯುವ ದುರ್ದೈವ ಒದಗಿ ಬಂದಿದೆ ಎಂದು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಈ ಪರಿಣಾಮವಾಗಿ `ಲಿಂಗಾಯತ’ರಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. `ವೀರಶೈವ-ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರವನ್ನು ಪಡೆಯುವುದರಿಂದ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ ಹಾಗೂ ಉದ್ಯೋಗದಲ್ಲಿ ಪ್ರವೇಶ ದೊರಕಲಾರದ ಸ್ಥಿತಿ ಬಂದಿದೆ. ಇತ್ತೀಚೆಗೆ ನವೋದಯ ಪ್ರವೇಶ ಪರೀಕ್ಷಾ ಸಂದರ್ಭದಲ್ಲೂ ಇದರ ಪರಿಣಾಮ ಕಂಡಿದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅರ್ಹತೆ ಇದ್ದರೂ ಕೂಡಾ `ವೀರಶೈವ-ಲಿಂಗಾಯತ’ ಜಾತಿ ಪ್ರಮಾಣಪತ್ರದಿಂದಾಗಿ ನವೋದಯ ಶಾಲೆಗಳಲ್ಲಿ ಪ್ರವೇಶ ದೊರಕದೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಕಣ್ಣೀರಿಟ್ಟ ಪ್ರಸಂಗ ಜರುಗಿದೆ.

ಇಂಥಹ ದುರ್ದೆಸೆ, ಅನ್ಯಾಯ ತಪ್ಪಿಸಲು ಲಿಂಗಾಯತರಿಗೆ ಅವರದೇ ಜಾತಿಯಾದ `ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರ ನೀಡುವುದು ಅವಶ್ಯವಾಗಿದೆ ಎಂದು  ಗದುಗಿನ ಬಸವಪರ ಸಂಘಟನೆಗಳಾದ ಲಿಂಗಾಯತ ಪ್ರಗತಿಶೀಲ ಸಂಘ, ಬಸವ ದಳ, ಬಸವ ಕೇಂದ್ರ, ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳು ಮೊದಲಿನಂತೆ ಜಾತಿ ಪ್ರಮಾಣಪತ್ರ ವಿತರಿಸಲು ಆಗ್ರಹಿಸಿವೆ.

ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ, ಬಸವಕೇಂದ್ರದ ಕಾರ್ಯದರ್ಶಿ ಶೇಕಣ್ಣ ಕವಳಿಕಾಯಿ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ.ಎಸ್. ಚೆಟ್ಟಿ ಹಾಗೂ ಬಿ.ವಿ.ಕಾಮಣ್ಣನವರ, ಕೆ.ವಿ.ಗೋಣಿ, ಮಲ್ಲಿಕಾರ್ಜುನ ಖಂಡೆಮ್ಮನವರ, ವೀರಣ್ಣ ಮುದಗಲ್ಲ, ಸಿದ್ಧಣ್ಣ ಅಂಗಡಿ, ರಾಮಣ್ಣ ಕಳ್ಳಿಮನಿ, ಎಂ.ಬಿ. ಲಿಂಗದಾಳ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!