ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸೆ.28 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಬಂದ್ ವೇಳೆ ಶಾಂತಿ ಭಂಗ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದರು.
ಇಲ್ಲಿನ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್ ಸಂಬಂಧಿಸಿದಂತೆ ಪ್ರತಿಭಟನೆಗೆ ಮುಂದಾಗಿರುವ ಸಂಘಟನೆಗಳ ಮುಖಂಡರ ಸಭೆ ನಡೆಸಲಾಗಿದೆ. ಸಂಘಟಕರಿಗೆ ಸುಪ್ರಿಂಕೋರ್ಟ ಗೈಡ್ ಲೈನ್ಸ್ ಮಾಹಿತಿ ಜೊತೆಗೆ ಕಾನೂನು ಪಾಲನೆ ಮಾಡುವಂತೆ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿಸಿದರು.
ಬಂದ್ ವೇಳೆ ದೈನಂದಿನ ಕೆಲಸದಲ್ಲಿ ನಿರತರಾದವರಿಗೆ ಬಲವಂತವಾಗಿ ಬಂದ್ ಮಾಡುವಂತೆ ಒತ್ತಾಯಿಸಬಾರದು. ಒಂದು ವೇಳೆ ಬಲವಂತ ಮಾಡುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಂದ್ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಎರಡು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
Trending Now



