HomeGadag Newsಹುಲಕೋಟಿಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ: ಅನಿಲ್ ವಾಗ್ದಾಳಿ

ಹುಲಕೋಟಿಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ: ಅನಿಲ್ ವಾಗ್ದಾಳಿ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

‘ದೇಶದಲ್ಲಿ ಕಾಂಗ್ರೆಸ್ ಎಪ್ಪತ್ತು ವರ್ಷ ಆಡಳಿತ ಮಾಡಿದರೂ ಸಹಿತ ಗ್ರಾಮ ಸ್ವರಾಜ್ ಹಾಗೂ ಮಹಾತ್ಮಾ ಗಾಂಧಿಯವರ ತತ್ವ ಸಿದ್ದಾಂತಗಳನ್ನು ಮಾತನಾಡಿದರೆ ಹೊರತು ಗಾಂಧಿಯವರ ಕನಸು ನನಸು ಮಾಡಲಿಲ್ಲ’ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಆರೋಪಿಸಿದರು.

ನಗರದ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹದಿಮೂರು, ಹದಿನಾಲ್ಕು ಮತ್ತು ಹದಿನೈದನೆಯ ಹಣಕಾಸಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಕೋಟಿ ರೂ. ಅನುದಾನ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ; ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಣ

ಹಿಂದಿನ ಸರ್ಕಾರದಲ್ಲಿ ಗದಗನ ಶಾಸಕರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಈ ವೇಳೆ ಬಯಲು ಮುಕ್ತ ಶೌಚಾಲಯಕ್ಕೆ ವಿಶೇಷ ಪ್ರಶಸ್ತಿ ಪಡೆದರು. ಆದರೆ, ಯಾವ ರೀತಿ ಪಡೆದರೋ ಗೊತ್ತಿಲ್ಲ, ಹೆಂಗ ದಾಖಲೆ ಕೊಟ್ಟರೋ ಒಟ್ಟಿನಲ್ಲಿ ಪ್ರಶಸ್ತಿ ಪಡೆದರು. ಆದರೆ, ಅವರ ಹುಲಕೋಟಿ ಭಾಗದಲ್ಲಿ ಹೋದರೆ ಯಾವ ಪರಿಸ್ಥಿತಿ ಇದೆ ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಅವರು ಮಾಡಿರುವ ಒಂದೇ ಒಂದು ಕೆಲಸ ಶುದ್ಧ ನೀರಿನ ಘಟಕ ಹಾಕಿರುವುದು. ಅವರು ಮನಸ್ಸು ಮಾಡಿದ್ದರೆ ಹುಲಕೋಟಿಗಷ್ಟೇ ತೆಗೆದುಕೊಂಡು ಹೋದ ತುಂಗಭದ್ರಾ ನೀರನ್ನು ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬರುವ 12 ಗ್ರಾಪಂ ವ್ಯಾಪ್ತಿಯ ಇತರೆ ಗ್ರಾಮಗಳಲ್ಲಿರುವ ಕೆರೆಗಳನ್ನು ತುಂಬಿಸಬಹುದಿತ್ತು. ಅವರಿಗೆ ಆ ಬಗ್ಗೆ ಇಚ್ಛಾಶಕ್ತಿ ಇಲ್ಲ. ಸುಮ್ಮನೆ ಶುದ್ಧ ನೀರಿನ ಹರಿಕಾರ ಅಂತಾ ಹೆಸರು ತಗೊಂಡರು ಎಂದು ಶಾಸಕ ಎಚ್.ಕೆ.ಪಾಟೀಲ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಡಿ.ಆರ್.ಪಾಟೀಲ್ ಅವರ ಬಗ್ಗೆ ಗೌರವ ಬರುತ್ತಿದೆ. ಬೇರೆ ಪಕ್ಷದಲ್ಲಿದ್ದರೂ ಬಿಜೆಪಿ ಪಕ್ಷದ ಹಾಗೂ ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತ ಪಾಲಿಸುತ್ತಿದ್ದಾರೆ. ಅವರಿಗೆ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆ ಇದೆ ಎಂದ ಅವರು, ಗಾಂಧಿಜೀಯವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಗದುಗಿನ ಭಾಗದ ಹುಲಕೋಟಿ ಮತ್ತು ಕುರ್ತಕೋಟಿಗೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಹಾಗಾಗಿ ಇಲ್ಲಿ ಸ್ವಾತಂತ್ರ್ಯ ಕೊಡಿಸುವ ಕೆಲಸವನ್ನು ನೀವೇ ಮುಂದೆ ನಿಂತು ಮಾಡಬೇಕು ಎಂದರು.

ಹುಲಕೋಟಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಗಬೇಕೆಂದು ಉತ್ಸಾಹದಲ್ಲಿದ್ದು, ಅವರಿಗೆ ಭಯ ಹುಟ್ಟಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೇ. ಸೋಲು ಬಂದಾಗ ಒಪ್ಪಿಕೊಳ್ಳಬೇಕು. ಗೆಲವಾದಾಗ ಕೆಲಸ ಮಾಡಿ ತೋರಿಸಬೇಕು.

ಈ ಭಾಗದ ಬಹಳಷ್ಟು ಕಾರ್ಯಕರ್ತರು ಚುನಾವಣೆಗೆ ನಿಲ್ಲುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು. ಹುಲಕೋಟಿ ಮಿಲ್ ನಲ್ಲಿ ಕೆಲಸ ಮಾಡುವ ಸುಮಾರು 200 ರಿಂದ 300 ಜನ ಹುಲಕೋಟಿಯವರಲ್ಲ, ಇಲ್ಲಿ ವಾಸವೂ ಆಗಿಲ್ಲ. ಯಾವತ್ತೂ ಮಿಲ್ ಬಂದ್ ಆಗಿವೆಯೋ ಅವತ್ತೇ ಊರ ಬಿಟ್ಟು ಹೋಗಿದ್ದರೂ ಅವರ ಹೆಸರು ಮತದಾರರ ಪಟ್ಟಿಯಲ್ಲಿದ್ದು, ತೆಗೆದು ಹಾಕುವ ಕೆಲಸವಾಗಿಲ್ಲ. ಅಲ್ಲದೇ, ಅಸುಂಡಿ, ಶ್ಯಾಗೋಟಿ, ದುಂದೂರ ಗ್ರಾಮದವರ ಮತ ಹುಲಕೋಟಿಯಲ್ಲಿದ್ದು, ಇವೆಲ್ಲಾ ಬಂದ್ ಆಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಗ್ರಾ.ಪಂ.ಚುನಾವಣೆ ಮಾಡುವುದಕ್ಕೆ ಮುಕ್ತವಾದ ಅವಕಾಶ ಕಲ್ಪಿಸಿ ಕೊಡಬೇಕು. ಗದಗ ವಿಧಾನಸಭಾ ಮತಕ್ಷೇತ್ರದ 12 ಗ್ರಾಮ ಪಂಚಾಯತಿಗಳಲ್ಲಿ ಈ ಬಾರಿ ಬಿಜೆಪಿ 10 ಗ್ರಾ.ಪಂ.ಗಳಲ್ಲಿ ಜಯ ಸಾಧಿಸಲಿದೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಹಿರಿಯ ಮುಖಂಡ ಕಾಂತಿಲಾಲ್ ಬನ್ಸಾಲಿ, ನಗರಸಭೆಯ ಮಾಜಿ ಸದಸ್ಯ ರಾಘವೇಂದ್ರ ಯಳವತ್ತಿ, ಮಾಧವ ಗಣಾಚಾರಿ, ಮುಖಂಡರಾದ ದ್ಯಾಮಣ್ಣ ಮುಳಗುಂದ, ಭದ್ರೇಶ್ ಕುಸ್ಲಾಪೂರ , ರವಿ ವಗ್ಗನವರ ಸೇರಿದಂತೆ ಗ್ರಾಮೀಣ ಭಾಗದ ಕಾರ್ಯಕರ್ತರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!