ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ಶ್ರೀದೇವಿ ಮಟಕಾ ಕಂಪನಿ ವಿರುದ್ಧ ಮಾತ್ರ ಎಸ್ಪಿಯವರಿಗೆ ದೂರು ನೀಡಿರುವುದು ಸಮಂಜಸವಲ್ಲ, ಅವರ ಬೆಂಬಲಿಗ ವಿಶ್ವನಾಥ ಸಹ ಮಟ್ಕಾ ದಂಧೆಯಲ್ಲಿ ತೊಡಗಿದ್ದಾರೆ. ಕೂಡಲೇ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸಿ ದಂಧೆಕೋರರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮಂಗಳವಾರ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆಯ ಮುಖಂಡರು ದೂರು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ದೂರು ಸಲ್ಲಿಸಿದ ಅವರು, ತಂಗಡಗಿಯವರಿಗೆ ನಿಜವಾಗಲೂ ಮಟಕಾ ಬಂದ್ ಮಾಡಿಸುವ ಕಳಕಳಿ ಇದ್ದರೆ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸುವಂತೆ ದೂರು ನೀಡಬೇಕಿತ್ತು. ಆದರೆ ಶಿವರಾಜ ಅವರ ಕಣ್ಣು ಶ್ರೀದೇವಿ ಕಂಪನಿ ಮೇಲಷ್ಟೇ ಯಾಕೆ ಎಂದು ಸಂಘಟನೆಯ ಗಂಗಾವತಿ ತಾಲೂಕಾಧ್ಯಕ್ಷ ಬಿ.ಕಿಶೋರ್ ಪ್ರಶ್ನಿಸಿದರು.
ಶಿವರಾಜ ತಂಗಡಗಿಯವರ ಬಲಗೈ ಭಂಟ ವಿಶ್ವನಾಥಸ್ವಾಮಿ ಕನಕಗಿರಿ 15-20 ವರ್ಷಗಳಿಂದ ಮಟ್ಕಾ ಆಡಿಸುತ್ತಿದ್ದಾರೆ. ಮೊದಲು ಅವರನ್ನು ಗಡಿಪಾರು ಮಾಡಬೇಕು. ಜೊತೆಗೆ ಜಿಲ್ಲೆಯ ಯಾವುದೇ ಭಾಗದಲ್ಲಾದರೂ, ಯಾವುದೇ ಮಟಕಾ ಕಂಪನಿಯಾದರೂ ಸರಿ ಎಲ್ಲವನ್ನೂ ಬಂದ್ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.