ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ವ್ಯಕ್ತಿಯೋರ್ವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಮುಂಡರಗಿ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ರಂಗಪ್ಪ ಅಲಿಯಾಸ ರಂಗಸ್ವಾಮಿ ಮುಂಡರಗಿ ತಾಲ್ಲೂಕಿನ ಶಿರನಹಳ್ಳಿ ಗ್ರಾಮದವನಾಗಿದ್ದು, ಗೌಂಡಿ ಕೆಲಸ ಮಾಡುತ್ತಾನೆ. ಆರೋಪಿ ರಂಗಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಶಂಕಿಸಿ, ಫಕ್ಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಕೊಲೆಯಾದ ವ್ಯಕ್ತಿ ಫಕ್ಕೀರಪ್ಪ ಆರೋಪಿ ರಂಗಸ್ವಾಮಿಗೆ ದೂರದ ಸಂಬಂಧಿಯಾಗಿದ್ದು, ಚಿಕ್ಕಪ್ಪನಾಗಬೇಕು ಎಂದು ತಿಳಿಸಿದರು.
ಕೊಲೆಯಾದ ಫಕ್ಕೀರಪ್ಪ ತಳವಾರ ಶಿಂಗಟಾಲೂರು ಗ್ರಾಮದವನಾಗಿದ್ದು, ಗಂಗಾಪೂರ ಶುಗರ್ ಪ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ನ.೧೨ ರಂದು ರಾತ್ರಿ ಪ್ಯಾಕ್ಟರಿಯ ಗೊಬ್ಬರ ತಯಾರಿಸುವ ಬ್ಯಾಕರ್‌ನಲ್ಲಿ ಮಲಗಿಕೊಂಡಿದ್ದಾಗ ಆರೋಪಿ ರಂಗಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗಂಗಾಪೂರ ಶುಗರ್ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್‌ನ ಕೊಲೆ ಪ್ರಕರಣ ಬೇಧಿಸಲು ಎಸ್ಪಿ ಯತೀಶ್ ಎನ್., ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಧೀರಕುಮಾರ ಬೆಂಕಿ, ಸಿಬ್ಬಂದಿಗಳಾದ ಜೆ.ಐ.ಬಚ್ಚೇರಿ, ನೀಲಕಂಠ ಭಂಗಿ, ಕೊಟೇಶ ಒಡೆಯರ, ಜಿ.ಎನ್.ಮಜ್ಜಗಿ, ಮಂಜು ಮಾದರ, ಶರಣಪ್ಪ ನಾಗೇಂದ್ರಗಡ, ಗದಗ ಡಿಪಿಒದಲ್ಲಿರುವ ಗುರುರಾಜ ಬೂದಿಹಾಳ, ಆನಂದಸಿಂಗ್ ದೊಡ್ಡಮನಿ ಅವರನ್ನೊಳಗೊಂಡ ತಂಡವು ಶ್ರಮಿಸಿತ್ತು. ಈ ತಂಡಕ್ಕೆ ಎಸ್‌ಪಿ ಯತೀಶ್ ಎನ್. ಅವರು ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದರು.