-ಹದಿನೈದು ದಿನ ಕಾದು ನೋಡಿದ ಬಳಿಕ ಆಡಿಯೊ ಬಿಡುಗಡೆ
-ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಸ್ಪಿ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ರೋಚಕ ಕ್ಷೇತ್ರ ಕನಕಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಜಗಳ್‌ಬಂಧಿ ತಾರಕಕ್ಕೇರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಟ್ರ್ಯಾಕ್ಟರ್ ರ‌್ಯಾಲಿ ಮಾಡಿದರೆ, ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಸಹ ಭಾರೀ ಪ್ರಮಾಣದ ರ‌್ಯಾಲಿ ನಡೆಸಿತು. ಈ ನಡುವೆ ಶ್ರೀದೇವಿ ಹೆಸರಿನ ಮಟಕಾ ದಂಧೆ ಕುರಿತು ದೊಡ್ಡ ಚರ್ಚೆಯೇ ಶುರುವಾಗಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ನಾನಾ ಹೆಸರಿನಲ್ಲಿ ಮಟಕಾ ಆಡಿದರೆ ಪೊಲೀಸ್ ಅತಿಥಿಯಾಗುವುದು ನಿಶ್ಚಿತ. ಆದರೆ ಶ್ರೀದೇವಿ ಹೆಸರಿನ ಮಟಕಾ ಆಡಿದರೆ ಯಾವ ಪೊಲೀಸರು ಏನೂ ಮಾಡಲ್ವಂತೆ…?
ಹೀಗಂತ ದೂರು ನೀಡಿದ್ದು ಮಾಜಿ ಸಚಿವ ಶಿವರಾಜ ತಂಗಡಗಿ. ಶ್ರೀದೇವಿ ಹೆಸರಿನಲ್ಲಿ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ಆಡಿಸುತ್ತಿದ್ದಾರೆ. ಇದು ಶೇಕಡಾ ನೂರರಷ್ಟು ಸತ್ಯ. ಮೊದಲ ಹಂತವಾಗಿ ದೂರು ದಾಖಲಿಸುತ್ತಿದ್ದೇವೆ. ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿಯವರು, ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಮಟಕಾ ದಂಧೆ, ಮರಳು ಅಕ್ರಮ ನಾನು ಮಂತ್ರಿಯಾದಾಗಲೂ ಕನಕಗಿರಿ ಕ್ಷೇತ್ರದಲ್ಲಿ ಇತ್ತು. ಸಾಧ್ಯವಾದಷ್ಟು ಅಕ್ರಮ ನಿಯಂತ್ರಣಕ್ಕೆ ಶ್ರಮಿಸಿದ್ದೇನೆ. ಈಗ ನನ್ನ ಕ್ಷೇತ್ರದಲ್ಲೇ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ದಂಧೆ ನಡೆಸಲು ಕುಮ್ಮಕ್ಕು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸತ್ಯಾಂಶ ಇಲ್ಲದ, ಸಮರ್ಪಕ ಸಾಕ್ಷಿಗಳಲ್ಲದ ಯಾವ ಸಂಗತಿಯ ಬೆನ್ನ ಹಿಂದೆ ಬೀಳಲ್ಲ. ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ತನಿಖೆ ಸರಿಯಾಗಿದ್ದರೆ ತಪ್ಪಿತಸ್ಥರು ಖಂಡಿತವಾಗಿ ಬಲೆಗೆ ಬೀಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತಂಗಡಗಿ, ಒಂದೊಮ್ಮೆ ಈ ಪ್ರಕರಣವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಉದಾಸೀನ ಮಾಡಿದರೆ ಶ್ರೀದೇವಿ ಹೆಸರಿನ ಮಟಕಾ ದಂಧೆಗೆ ಪೊಲೀಸ್ ಅಧಿಕಾರಿ ಕುಮ್ಮಕ್ಕು ನೀಡುತ್ತಿರುವ ಆಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ಆನಂತರ ಬೀದಿಗಿಳಿದು ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಅಧಿವೇಶನದಲ್ಲೂ ನಮ್ಮ ಪಕ್ಷದ ಮುಖಂಡರು ಚರ್ಚಿಸುತ್ತಾರೆ ಎಂದು ತಿಳಿಸಿದರು.
“ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಸುಮಾರು 21 ಜನರನ್ನು ಗಡಿ ಪಾರು ಮಾಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿದ್ದು, ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.”
ಟಿ. ಶ್ರೀಧರ್, ಎಸ್ಪಿ, ಕೊಪ್ಪಳ
ಹ…. ದುಡ್ಡಿನಿಂದ ಬಿಜೆಪಿ ಅಧಿಕಾರಕ್ಕೆ
“ಕನಕಗಿರಿ ಕ್ಷೇತ್ರದಲ್ಲೇ ಅಕ್ರಮಗಳು ಹೆಚ್ಚುತ್ತಿವೆ. ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇನರ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಹ… ದುಡ್ಡಿನಿಂದ. ನಮ್ಮ ಪಕ್ಷದಲ್ಲಿ ಶಾಸಕ, ಸಚಿವರಾಗಿದ್ದವರು ಬಿಜೆಪಿ ಜೊತೆ ಕೈ ಜೋಡಿಸಿದ್ದು ಹ…. ದುಡ್ಡಿಗಾಗಿ.”
