-ಚಿರತೆ ಇರೋ ಪ್ರದೇಶದಲ್ಲಿ ಹುಲಿಗಳ ಕಾಟ ಎಲ್ಲಿಂದ? –ಸುಳ್ಳು ಸುದ್ದಿ ವೈರಲ್ ಮಾಡೋರ ವಿರುದ್ಧ ಕಠಿಣ ಕ್ರಮ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜನ ಚಿರತೆಯೊಂದು ಶುಕ್ರವಾರ ನಸುಕಿನ ವೇಳೆ ಸೆರೆ ಸಿಕ್ಕಿದ್ದಕ್ಕೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಇನ್ನೂ ಮೂರ್ನಾಲ್ಕು ಚಿರತೆಗಳು ಸಂಗಾಪುರ, ಆನೆಗೊಂದಿ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಬೀಡು ಬಿಟ್ಟಿರುವ ಭಯ ಆವರಿಸಿಕೊಂಡಿರುವ ಈ ಹೊತ್ತಲ್ಲಿ ಮೂರ್ನಾಲ್ಕು ಹುಲಿಗಳು ಕೂಡಿಕೊಂಡು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿರುವ, ಆ ಹುಲಿಗಳನ್ನು ಓಡಿಸಲು ಗುಂಡು ಹೊಡೆಯುತ್ತಿರುವ ಘಟನೆ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆಯುತ್ತಿದೆ ಎಂಬರ್ಥದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರನ್ನು ಮತ್ತಷ್ಟೂ ಆತಂಕಕ್ಕೆ ತಳ್ಳಿದೆ.
ಇಡೀ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 526. ಬಂಡೀಪುರ, ದಾಂಡೇಲಿಯಂಥ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡದ್ದನ್ನ ಒಪ್ಪಬಹುದು. ದಟ್ಟ ಕಾನನ ಹುಲಿಗಳ ಮೆಚ್ಚಿನ ತಾಣ. ಗುಡ್ಡಗಾಡು ಪ್ರದೇಶದಲ್ಲಿ ಹುಲಿಗಳು ಬರಲಾರವು. ಅಂಥದ್ದರಲ್ಲಿ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ, ಹುಲಿ ಓಡಿಸಲು ಗುಂಡಿನ ಪ್ರತಿ ದಾಳಿ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲು ಸಾಧ್ಯವೇ ಇಲ್ಲ. ಇದೆಲ್ಲ ಶುದ್ಧ ಸುಳ್ಳು. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ಜಿಲ್ಲೆಯ ಸಾರ್ವಜನಿಕರು ಈ ಬಗ್ಗೆ ಆತಂಕಗೊಳ್ಳುವ ಅಗತ್ಯ ಇಲ್ಲ. ಚಿರತೆ ಕಾಟದ ಬಗ್ಗೆ ಮೈ ಮರೆಯುವಂತಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ ಎನ್ನಲಾದ ಹುಲಿ ದಾಳಿಯ ವಿಡಿಯೊ ಫೇಕ್. ಅದು ಬೇರೆ ರಾಜ್ಯದಲ್ಲೊ ಅಥವಾ ಬೇರೆ ದೇಶದಲ್ಲೋ ಹಿಂದೆಂದೊ ನಡೆದಿರುವ ಘಟನೆ ಇರಬಹುದು. ಕೆಲವರು ಅದನ್ನು ಎಡಿಟ್ ಮಾಡಿ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿರುವ ಶಂಕೆ ಇದೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸೈಬರ್ ಕ್ರೈಮ್‌ನವರಿಗೆ ಸೋಶಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣು ಇಡುವಂತೆಯೂ, ಈ ವಿಡಿಯೊ ಹರಿಬಿಟ್ಟಿರುವ ಆರೋಪಿಗಳನ್ನು ಪತ್ತೆ ಹಚ್ಚುವಂತೆಯೂ ಸೂಚಿಸಲಾಗುವುದು.
–ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ, ಕೊಪ್ಪಳ