ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯ ರೈತರು ನಿರಂತರ ಮಳೆಯಿಂದ ಒಂದು ಕಡೆ ಹೈರಾಣಾಗಿದ್ದಾರೆ. ಇನ್ನೊಂದು ಕಡೆ ಸಮರ್ಪಕವಾದ ರಸ್ತೆ ಇಲ್ಲದ ಕಾರಣ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆಗೆ ತರಲು ಆಗದಂಥ ಪರಿಸ್ಥಿತಿಗೆ ಸಿಲುಕಿದ್ದಾರೆ.
ಇದು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ಕಥೆ. ಹೇಳಿಕೊಳ್ಳಲು ಇದು ಸಂಸದರ ಆದರ್ಶ ಗ್ರಾಮ. ಹಾವೇರಿ ಲೋಕಸಭೆ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅವರ ಆದರ್ಶ ಗ್ರಾಮ. ಆದರೆ ಯಾವ ನಿಟ್ಟಿನಲ್ಲಿಯೂ ಈ ಗ್ರಾಮ ಆದರ್ಶವಾಗಿಲ್ಲ.
ಯಳವತ್ತಿ ಗ್ರಾಮದ ಅಭಿವೃದ್ಧಿಗೆ ಸಂಸದ ಶಿವಕುಮಾರ ಉದಾಸಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಕೋಟಿ ರೂ. ಲೆಕ್ಕದಲ್ಲಿ ಅನುದಾನ ಒದಗಿಸಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಸಂಸದರು ಆಸ್ಥೆ ವಹಿಸಿದ್ದರೆ ಯಳವತ್ತಿ ನಿಜವಾಗಿಯೂ ಆದರ್ಶವಾಗುತ್ತಿತ್ತು. ಗ್ರಾಮದ ರಸ್ತೆಗಳನ್ನು ನೋಡಿದರೆ ಯಳವತ್ತಿ ಯಾವ ರೀತಿಯಿಂದಲೂ ಆದರ್ಶ ಗ್ರಾಮ ಆಗುವುದಿಲ್ಲ.
ಒಂದು ಎಕರೆ ಶೇಂಗಾ ಬೆಳೆಯಲು 15 ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಮಳೆಯಿಂದ ಶೇಂಗಾ ಬೆಳೆ ಜಮೀನಿನಲ್ಲಿಯೇ ಉಳಿದಿದೆ. ಎತ್ತಿನ ಚಕ್ಕಡಿ, ಟ್ರಾಕ್ಟರ್ ಮೂಲಕ ತರಬೇಕು ಎಂದರೆ ರಸ್ತೆ ಇಲ್ಲದೇ ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಜಮೀನುಗಳಿಗೆ ನಡೆದು ಹೋಗಲು ಸಹ ಆಗದ ಸ್ಥಿತಿ ನಿರ್ಮಾಣವಾಗಿದೆ.
-ಯಳವತ್ತಿ ಗ್ರಾಮಸ್ಥರು.
ಯಳವತ್ತಿ ಗ್ರಾಮದ ಜಮೀನುಗಳಿಗೆ ಹೋಗುವ ರಸ್ತೆ ಸರಿಯಾಗಿಲ್ಲದ ಕಾರಣ ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಶೇಂಗಾ ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಒಯ್ಯುವುದು ಕಷ್ಟವಾಗಿದೆ. ನಿರಂತರ ಮಳೆಯಿಂದ ಕಟಾವು ಮಾಡಲು ಸಾಧ್ಯವಾಗದ ಸ್ಥಿತಿ ಒಂದೆಡೆಯಾದರೆ, ಮಳೆ ವಿರಾಮ ನೀಡಿದಾಗ ಕಟಾವು ಮಾಡಿಕೊಂಡು ಹೋಗಬೇಕೆಂದರೆ ರಸ್ತೆ ಇಲ್ಲದ ವಾಹನಗಳು ಸಂಚರಿಸದ ಸ್ಥಿತಿ ಮತ್ತೊಂದೆಡೆ. ಹೀಗಾಗಿ ಜಮೀನುಗಳಿಗೆ ಹೋಗುವ ರಸ್ತೆ ದುರಸ್ತಿ ಮಾಡಿಕೊಡಿ ಎಂದು ಯಳವತ್ತಿ ಗ್ರಾಮಸ್ಥರು ಮನವಿ ಮಾಡಿಕೊಳ್ಳುವಂತಾಗಿದೆ.
ಸಂಸದರು ನೋಡಲಿ
ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರು ತಮ್ಮ ಆದರ್ಶ ಗ್ರಾಮದ ಸ್ಥಿತಿಯನ್ನು ಒಮ್ಮೆ ನೋಡಲಿ. ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದ ಸ್ಥಿತಿಯನ್ನು ಕಣ್ಣಾರೆ ಕಂಡ ನಂತರವಾದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಿ ಎನ್ನುತ್ತಾರೆ ಯಳವತ್ತಿ ಗ್ರಾಮದ ರೈತ ಚನ್ನಬಸವನಗೌಡ.
ಯಳವತ್ತಿ ಗ್ರಾಮದ ವ್ಯಾಪ್ತಿಯ ಜಮೀನುಗಳು ಫಲವತ್ತಾಗಿವೆ. ಈರುಳ್ಳಿ, ಹತ್ತಿ, ಶೇಂಗಾ, ಗೋವಿನ ಜೋಳ ಬೆಳೆಯಲು ಸೂಕ್ತವಾಗಿದೆ. ಆದರೆ ಈ ಬಾರಿ ಸುರಿದ ಅಪಾರ ಮಳೆಯಿಂದ ಶೇಂಗಾ ಬೆಳೆ ಜಮೀನಿನಲ್ಲಿಯೇ ಕೊಳೆಯುವಂತಾಗಿದೆ. ಅಳಿದುಳಿದ ಫಸಲನ್ನು ತರಬೇಕು ಎಂದರೆ ರಸ್ತೆಗಳು ಸರಿಯಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ರಸ್ತೆ ದುರಸ್ತಿಗಾಗಿ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸುತ್ತಾರೆ ಯಳವತ್ತಿ ಗ್ರಾಮಸ್ಥರು.
ಇನ್ನಾದರೂ ಎಚ್ಚೆತ್ತುಕೊಳ್ಳಲಿ
ಅತಿಯಾದ ಮಳೆಯಿಂದ ಬೆಳೆನಾಶ ಒಂದು ಕಡೆಯಾದರೆ, ರಸ್ತೆ ಸರಿ ಇಲ್ಲದ ಕಾರಣ ಅಳಿದುಳಿದ ಬೆಳೆಯನ್ನು ಜಮೀನಿನಿಂದ ತರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ಕಷ್ಟ ಪರಿಹರಿಸಲು ಮುಂದಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.