ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ ಸಂಕನೂರ -ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದೆಲ್ಲೆಡೆ ಬಿಜೆಪಿ ಅಲೆ -ಸಚಿವರು, ಸಂಸದರು, ಶಾಸಕರು, ಕಾರ್ಯಕರ್ತರಿಂದ ಭರ್ಜರಿ ಪ್ರಚಾರ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ವಿಧಾನ ಪರಿಷತ್ತಿನಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಪ್ರತಿನಿಧಿಯಾಗಿ ಆರು ವರ್ಷಗಳಲ್ಲಿ ಅಗಾಧವಾದ ಸಾಧನೆ ಮಾಡಿರುವ ಪ್ರೊ| ಎಸ್.ವಿ. ಸಂಕನೂರ, ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಸದನದ ಒಳಗೆ ಹಾಗೂ ಹೊರಗೆ ಅವಿರತವಾಗಿ ಶ್ರಮಿಸಿದ್ದಾರೆ. ಅವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದಾರೆ. ಕ್ಷೇತ್ರದ ಮತದಾರರ ಜತೆಗೆ ನಿರಂತರ ಸಂಪರ್ಕದಲ್ಲಿರುವ ಅವರು ಎರಡನೇ ಅವಧಿಗೆ ಪುನರಾಯ್ಕೆಗೊಳ್ಳುವ ವಿಶ್ವಾಸದಲ್ಲಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಬಿ.ಸಿ. ಪಾಟೀಲ, ಸಿ.ಸಿ. ಪಾಟೀಲ, ಬಿ. ಶ್ರೀರಾಮುಲು ಹಾಗೂ ಶಿವರಾಮ ಹೆಬ್ಬಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಯುವ ಮುಖಂಡ ಅನಿಲ ಮೆಣಸಿನಕಾಯಿ ಮುಂತಾದ ದಿಗ್ಗಜರು ಸಂಕನೂರು ಪರ ಪ್ರಚಾರ ಕೈಗೊಂಡಿದ್ದಾರೆ.

ಮೂವರು ಸಂಸದರು, 19 ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಹಾಗೂ ತಾ.ಪಂ.ಗಳ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೂ ಹಗಲಿರುಳೂ ಕ್ಷೇತ್ರದಾದ್ಯಂತ ಸಂಚರಿಸಿ ಸಂಕನೂರ ಅವರ ಗೆಲುವಿಗಾಗಿ ದುಡಿಯುತ್ತಿದ್ದಾರೆ. ಬೇರುಮಟ್ಟದಲ್ಲಿ ಪಕ್ಷ ಸಂಘಟನೆ ಬಲವಾಗಿರುವ ಕಾರಣ ತಮ್ಮ ಗೆಲುವೇನೂ ಕಷ್ಟವಾಗಲಾರದು. ಅಲ್ಲದೆ, ಧಾರವಾಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಕಾಲ್ ಸೆಂಟರ್ ಆರಂಭಿಸಿದ್ದು, ಕಾರ್ಯಕರ್ತರು ಸುಮಾರು 13 ಸಾವಿರಕ್ಕೂ ಅಧಿಕ ಮತದಾರರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗೆ ಕರೆ ಮಾಡಿ ಹಾಗೂ ಸಂದೇಶಗಳನ್ನು ಕಳುಹಿಸಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಸಂಕನೂರ ಹೇಳಿದ್ದಾರೆ.

ಅಪಾರ ಅನುಭವಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಪ್ರೊ| ಸಂಕನೂರು ಅವರು ಮತದಾರರ ಮೊದಲ ಪ್ರಾಶಸ್ತ್ಯದ ಆಯ್ಕೆಯೂ ಆಗಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ, ರಾಜ್ಯದ 36 ಇಲಾಖೆಗಳಲ್ಲಿ ಖಾಲಿಯಾಗಿರುವ ಸುಮಾರು ಎರಡು ಲಕ್ಷ ಹುದ್ದೆಗಳ ಭರ್ತಿಗೆ ಸದನದಲ್ಲಿ ಒತ್ತಾಯಿಸಿರುವ ಸಂಕನೂರ, ಸುಮಾರು 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಭಡ್ತಿ, ವಿಶೇಷ ಭತ್ಯೆ, ವೇತನ ತಾರತಮ್ಯ ನಿವಾರಣೆ, ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮುಂತಾದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಿದ್ದಾರೆ.

ಮತಕ್ಷೇತ್ರದ ವ್ಯಾಪ್ತಿಯ ಗದಗ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡದಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿರುವ ಸಂಕನೂರ ಅವರು, 1,955 ಪದವೀಧರರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಪದವಿ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ 7ನೇ ಯುಜಿಸಿ ವೇತನ ಜಾರಿ ಮಾಡುವಲ್ಲಿ ಹಾಗೂ ತಾಂತ್ರಿಕ, ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ 7ನೇ ಎಐಸಿಟಿಇ ವೇತನ ಶ್ರೇಣಿ ಜಾರಿಗೆ ಮತಿತು ವೈದ್ಯಕೀಯ ಸಿಬ್ದಂದಿಗೆ ಎನ್.ಪಿ.ಎಸ್. ಯೋಜನೆ ಜಾರಿ ಮಾಡಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಭವಿಷ್ಯದ ಯೋಜನೆಗಳು
ಎನ್.ಪಿ.ಎಸ್. ಬದಲು ಓ.ಪಿ.ಎಸ್. ಜಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಪಿಂಚಣಿ ಯೋಜನೆ ಜಾರಿ, ಅತಿಥಿ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಳ, ಪಶ್ಚಿಮ ಬಂಗಾಳ ರಾಜ್ಯ ಮಾದರಿಯಲ್ಲಿ ಸೇವಾ ಭದ್ರತೆ ಒದಗಿಸುವುದು, 1995ರ ಬಳಿಕ ಆರಂಭವಾಗಿರುವ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿ, ಯುವಸಮುದಾಯಕ್ಕೆ ಉದ್ಯೋಗ ಒದಗಿಸಿಕೊಡುವುದು ತಮ್ಮ ಭವಿಷ್ಯದ ಯೋಜನೆಗಳೆಂದು ಹೇಳಿರುವ ಪ್ರೊ| ಸಂಕನೂರ, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗಳಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ತಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅನುಕೂಲವಾಗುತ್ತದೆ.

ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಶೀಘ್ರ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಂಕನೂರ ತಿಳಿಸಿದ್ದಾರೆ.

ಸಂಕನೂರ ಪರ ಅಲೆ
ಸರಳ, ಸಜ್ಜನಿಕೆಯ ವ್ಯಕ್ತಿಯಾಗಿರುವ ಸಂಕನೂರ ಅವರು ಸದಾ ಜನರೊಂದಿಗೇ ಇದ್ದು, ಅವರ ಎಲ್ಲ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಜನಪ್ರತಿನಿಧಿ. ಯಾರ ಜೊತೆಗೂ ವಿರೋಧ ಕಟ್ಟಿಕೊಳ್ಳದೆ ಸದಾ ನಗುಮೊಗದಿಂದಲೇ ಎಲ್ಲರೊಂದಿಗೂ ವ್ಯವಹರಿಸುತ್ತಾರೆ.

ಕಳೆದ ಬಾರಿ 14,000 ಮತಗಳ ಅಂತರದಿಂದ ಸಂಕನೂರ ಗೆದ್ದಿದ್ದರು. ಈ ಬಾರಿ ಅವರ ಪ್ರತಿಯೊಂದು ಪ್ರಚಾರ ಸಭೆಯಲ್ಲೂ ಸುಮಾರು 500ಕ್ಕಿಂತ ಹೆಚ್ಚು ಜನರು ಭಾಗವಹಿಸಿರುವ ಕಾರಣ, ಅವರ ಗೆಲುವಿನ ಅಂತರ 25 ಸಾವಿರವನ್ನು ದಾಟುವ ನಿರೀಕ್ಷೆ ಕ್ಷೇತ್ರದಲ್ಲಿ ವ್ಯಕ್ತವಾಗಿದೆ.

ಎಸ್.ವಿ. ಸಂಕನೂರ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರಡ. ವಿಧಾನ ಪರಿಷತ್ ಸದಸ್ಯರಾಗಿ ಆರು ವರ್ಷಗಳ ಕಾಲ ಪರಿಷತ್ ಒಳಗೆ ಮತ್ತು ಹೊರಗೆ ಪದವೀಧರರ ಜೊತೆಗೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ. ಸಂಕನೂರ ಅವರ ವೈಯಕ್ತಿಕ ಸೇವೆ, ಸರಕಾರದ ಸಾಧನೆ ಸಂಕನೂರು ಅವರ ಗೆಲುವಿಗೆ ಕಾರಣವಾಗಲಿವೆ.
ಅನಿಲ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ


Spread the love

LEAVE A REPLY

Please enter your comment!
Please enter your name here