ವಿಜಯಸಾಕ್ಷಿ ಸುದ್ದಿ, ಉಡುಪಿ
ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾನೂನು ಕುರಿತು ಪರ ವಿರೋಧದ ಚರ್ಚೆಗಳು ಶುರುವಾಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಪ್ರಾರಂಭವಾಗಿದೆ.
ಲವ್ ಜಿಹಾದ್ ವಿಚಾರವಾಗಿ ಉಡುಪಿಯಲ್ಲಿ ಗುರುವಾರ ಪ್ರತಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯನವರು ಮೊಘಲ್ ಶಕೆಯಲ್ಲಿ ಬದುಕುತ್ತಿದ್ದಾರೆ.
ಮುನ್ನೂರು ವರ್ಷದಿಂದ ಲವ್ ಜಿಹಾದ್ ಇದೆ ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಅವರಿನ್ನೂ ಮೊಘಲ್ ಶಕೆಯಲ್ಲಿ ಇದ್ದಾರೆ ಎಂದರು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೆ ತರಲು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ.
ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶ ಸರ್ಕಾರಗಳು ಲವ್ ಜಿಹಾದ್ ಕಾನೂನು ಜಾರಿಗೆ ಚಿಂತನೆ ಮಾಡಿವೆ. ಅದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಚಿಂತನೆ ನಡೆಸಿದೆ ಎಂದರು.
ಲವ್ ಜಿಹಾದ್ ಕಾನೂನು ಹೇಗೆ ಜಾರಿಗೊಳಿಸಬೇಕು, ಯಾವ ಅಂಶಗಳನ್ನು ಸೇರಿಸಬೇಕೆಂಕು ಎಂಬುವುದು ಮುಖ್ಯವಾಗಿದೆ. ಲವ್ ಜಿಹಾದ್ ಕಾನೂನು ಕುರಿತು ಉತ್ತರಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆಯ ಪ್ರತಿಗಳನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಇದನ್ನು ಘೋಷಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.