ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿದ್ದ ಗ್ರಾ.ಪಂ. ಜನಾಧಿಕಾರ ಸಭೆಯಲ್ಲಿ ಚಾಮುಂಡೇಶ್ವರಿ ಸೋಲಿನ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದ ಸಿದ್ಧರಾಮಯ್ಯ ರಾಜ್ಯ ರಾಜಕಾರಣದಲ್ಲಿ ಬೀರುಗಾಳಿ ಎಬ್ಬಿಸುವ ಮೂಲಕ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದರು. ಅಲ್ಲದೇ, ಹಿಂದಿನ ಮೈತ್ರಿ ಸರ್ಕಾರದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರನ್ನೇ ಅನುಮಾನದಿಂದ ನೋಡುವಂತೆ ಮಾಡಿತ್ತು.
ಈ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಅವರು,
2018 ರಲ್ಲಿ ಮೈತ್ರಿಯಾಗಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು, ಹೈಕಮಾಂಡ್ ನ ನಿರ್ಧಾರವಾಗಿತ್ತು ಎಂದು ಹಲವು ಬಾರಿ ಸಿದ್ಧ ರಾಮಯ್ಯ ಹೇಳಿದ್ದಾರೆ. ಆದರೆ, ಚಾಮುಂಡೇಶ್ವರಿ ಭಾಷಣದ ವೇಳೆ, ನಾನು ಒಪ್ಪದೇ ಹೋಗಿದಿದ್ದರೆ ಕುಮಾರಸ್ವಾಮಿ ಅವರನ್ನು ಸಿಎಂ ಅಗಲು ಬಿಡುತ್ತಿರಲಿಲ್ಲ ಎಂದಿದ್ದಾರೆ. ಇಲ್ಲಿ ದ್ವಂದ್ವ ಇಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈತ್ರಿ ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿ ಸಿದ್ಧವನದಲ್ಲಿ ಸರ್ಕಾರ ಬೀಳಿಸುವ ಸಭೆ ನಡೆಸಿದವರು ಸಿದ್ಧರಾಮಯ್ಯ ಅಲ್ಲವೇ? ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಶಾಸಕರಲ್ಲಿ ಬಹುತೇಕರು ಅವರ ಬೆಂಬಲಿಗರಾಗಿರಲಿಲ್ಲವೇ? ಆದರೂ, ಸರ್ಕಾರ ಬೀಳಿಸಿದ್ದರ ಅಪವಾದದಿಂದ ಪಾರಾಗಲು ಸಿದ್ಧರಾಮಯ್ಯ ಯತ್ನಸುತ್ತಿದ್ದಾರೆ. ಇದು ಅವರ ಕಪಟ ನೀತಿ ಎಂದು ಹೆಚ್ ಡಿಕೆ ಕಟುವಾಗಿ ಟೀಕಿಸಿದ್ದಾರೆ.
ಸಿಎಂ ಸ್ಥಾನದಿಂದ ಇಳಿದ ನಂತರ ಸಿದ್ಧರಾಮಯ್ಯ ಸರ್ಕಾರಿ ನಿವಾಸ ತೊರಯಲಿಲ್ಲ. ಆ ವಿಚಾರದಲ್ಲಿ ಕಿಂಚಿತ್ತೂ ನಾಚಿಕೆ ಪ್ರದರ್ಶಿಸಲಿಲ್ಲ. ತಾವು ಸಿಎಂ ಆಗಿದ್ದಾಗ 6 ಗಂಟೆಗೆ ಹೇಳದೇ ಕೇಳದೇ ಕಚೇರಿ ತೊರೆದು ಅಜ್ಞಾತರಾಗುತ್ತಿದ್ದ ಸಿದ್ಧರಾಮಯ್ಯ, ರಾತ್ರಿ 12 ಗಂಟೆಯವರೆಗೆ ದುಡಿಯುತ್ತಿದ್ದ ನನ್ನ ಬಗ್ಗೆ ಮಾತನಾಡುವ ನೈತಿಕತೆ ಉಳ್ಳವರೇ?
37 ಸ್ಥಾನ ಗೆದ್ದಿದ್ದ ಜೆಡಿಎಸ್ ಗೆ ನಾವು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟೆವು ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ. ಅದು 37 ಸ್ಥಾನವಾಗಲಿ ಅಥವಾ 100 ಸ್ಥಾನಗಳಾದರೂ ಆಗಿರಲಿ. ಅದು ಜನಾದೇಶ. ಆ ವಿಚಾರದಲ್ಲಿ ಮೂದಲಿಕೆ ಮಾಡುವ ಸಿದ್ದರಾಮಯ್ಯ ಅವರಿಗೆ ಜನರ ಆಶಯ, ಅಭಿಪ್ರಾಯಗಳನ್ನು ಒಪ್ಪುವಂಥ ಮನಸ್ಥಿತಿಯೇ ಇಲ್ಲ ಎಂದು ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿ ಕಚೇರಿಗೆ ಬರುತ್ತಿರಲಿಲ್ಲವಂತೆ, ತಾಜ್ ವೆಸ್ಟೆಂಡ್ ನಲ್ಲಿ ಇರುತ್ತಿದ್ದರಂತೆ. ಅಹೋರಾತ್ರಿ ಜನತಾ ದರ್ಶನ ತಾಜ್ ವೆಸ್ಟೆಂಡ್ ನಲ್ಲಿ ನಡೆಯುತ್ತಿತ್ತೋ? ಸಿಎಂ ಕಚೇರಿಯಲ್ಲಿ ನಡೆಯುತ್ತಿತ್ತೋ ಸಿದ್ದರಾಮಯ್ಯನವರೇ? ಬಾದಾಮಿಯಲ್ಲಿ ಈಗ ನಡೆಯುತ್ತಿರುವ 1200 ಕೋಟಿ ಕಾಮಗಾರಿಗಳು ತಾಜ್ ವೆಸ್ಟೆಂಡ್ ನದ್ದ?
ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ