ಸೆ. 25ಕ್ಕೆ ಕೃಷಿ ಮಸೂದೆ ವಿರೋಧಿಸಿ ಭಾರತ ಬಂದ್: ರಾಜ್ಯದಲ್ಲಿ ರೈತ, ದಲಿತ, ಕಾರ್ಮಿಕರ ಜೊತೆಗೆ ಕನ್ನಡ ಸಂಘಟನೆಗಳು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 25ರಂದು ಅಖಿಲ ಭಾರತ ಬಂದ್‌ಗೆ ಕರೆ ನೀಡಲಾಗಿದೆ.

Advertisement

ಕರ್ನಾಟಕದಲ್ಲಿಯೂ ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ರೈತ ಸಂಘಟನೆಗಳು ನೀಡಿರುವ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಬೆಂಬಲ ವ್ಯಕ್ತಪಡಿಸಿದೆ.

ಈಗಾಗಲೇ ಕಳೆದ 2 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜನತಾ ಅಧಿವೇಶನದ ಹೆಸರಿನಲ್ಲಿ ಐಕ್ಯಹೋರಾಟ ನಡೆಸಲಾಗುತ್ತಿದೆ. ರೈತರ ವಿರುದ್ಧ ವಿರುವ, ಕಾರ್ಪೊರೇಟ್ ಕಂಪನಿಗಳಿಗೆ ಪ್ರಯೋಜನ ನೀಡುವ ಈ ಸುಗ್ರಿವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿವೆ.

ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಇಡೀ ಕೃಷಿಕ್ಷೇತ್ರಕ್ಕೆ ದೊಡ್ಡ ಬಿಕ್ಕಟ್ಟು ಎದುರಾಗಲಿದೆ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಲಕ್ಷಾಂತರ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಅವರ ಭೂಮಿ ಕಸಿದು, ಕಾರ್ಪೊರೇಟರ್‌ಗಳಿಗೆ ನೀಡಿ ರೈತರನ್ನು ಕೂಲಿಯಾಳುಗಳನ್ನಾಗಿಸಲು ಸರ್ಕಾರ ಮುಂದಾಗಿದೆ.

ಸರ್ಕಾರದ ನೀತಿಗಳನ್ನು ಖಂಡಿಸಿ ರೈತ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಬಂದ್‌ನಲ್ಲಿ ಪಾಲ್ಗೊಂಡು ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ ಎಂದಿದ್ದಾರೆ.

ದೇವರಾಜ್ ಅರಸು ಅವರು ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಎಂಬ ಮಹೋನ್ನತ ಆದರ್ಶ ನೀತಿಯನ್ನು ಈಗಿನ ಸರ್ಕಾರ ತಿರುಚಿ ದುಡ್ಡಿದ್ದವನೇ ಭೂಮಿಯ ಒಡೆಯ ಎಂಬ ನೀತಿಯನ್ನು ತಂದು ಜನರನ್ನು ಭಿಕ್ಷುಕರನ್ನಾಗಿಸುವ ಕ್ರೌರ್ಯಕ್ಕೆ ಸರ್ಕಾರ ಇಳಿದಿದೆ ಎಂದು ಟಿ.ಎ.ನಾರಾಯಣ ಆರೋಪಿಸಿದ್ದಾರೆ.

ಉತ್ತರದಲ್ಲಿ ಕಾಳ್ಗಿಚ್ಚು

ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರೈತರು ಬೀದಿಗೆ ಇಳಿದು ಸರ್ಕಾರಗಳ ಜೊತೆ ಸಂಘರ್ಷಕ್ಕೆ ಬಿದ್ದಿದ್ದಾರೆ. ಕೃಷಿ ಮಸೂದೆಗಳನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಪಂಜಾಬ್‌ನಲ್ಲಿಯೂ ಮೊದಲ ಬಾರಿಗೆ ಡೊಡ್ಡ-ಸಣ್ಣ ಸೇರಿದಂತೆ 31 ರೈತ ಸಂಘಟನೆಗಳು ಒಟ್ಟುಗೂಡಿವೆ.

ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟಂಬರ್ 25ರಂದು ಬೃಹತ್ ರಾಜ್ಯವ್ಯಾಪಿ ಬಂದ್ ನಡೆಸಲಿವೆ.


Spread the love

LEAVE A REPLY

Please enter your comment!
Please enter your name here