HomeGadag Newsಸ್ಥಳೀಯ ಸಂಸ್ಥೆಗಳ ಹುದ್ದೆ ಖಾಲಿ… ಖಾಲಿ!ಗದಗ ಜಿಲ್ಲೆಯ ಮುನ್ಸಿಪಾಲಿಟಿಗಳಲ್ಲಿ 437 ಹುದ್ದೆಗಳು ಖಾಲಿ

ಸ್ಥಳೀಯ ಸಂಸ್ಥೆಗಳ ಹುದ್ದೆ ಖಾಲಿ… ಖಾಲಿ!
ಗದಗ ಜಿಲ್ಲೆಯ ಮುನ್ಸಿಪಾಲಿಟಿಗಳಲ್ಲಿ 437 ಹುದ್ದೆಗಳು ಖಾಲಿ

Spread the love

ದುರ್ಗಪ್ಪ ಹೊಸಮನಿ

ವಿಜಯಸಾಕ್ಷಿ ವಿಶೇಷ, ಗದಗ:
ರಾಜ್ಯದ ಬಹುತೇಕ ಸರಕಾರಿ ಕಚೇರಿಗಳಲ್ಲಿ ನೌಕರರ ಕೊರತೆ ಸಾಮಾನ್ಯ. ಆದರೆ ಪಟ್ಟಣ, ನಗರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಬಹುವಾಗಿ ಕಾಡುತ್ತಿದ್ದು, ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎ ವೃಂದ ಹೊರತುಪಡಿಸಿ ಬಿ, ಸಿ ಹಾಗೂ ಡಿ ವೃಂದದ ನೌಕರರ ಕೊರತೆ ಇದೆ.

ಗದಗ-ಬೆಟಗೇರಿ ನಗರಸಭೆ, ಐದು ಪುರಸಭೆಗಳು, ಮೂರು ಪಟ್ಟಣ ಪಂಚಾಯತಿ ಸಹಿತ ಒಟ್ಟು 9 ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 1275 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 838 ಜನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂಬತ್ತು ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 457 ಜನ ಖಾಯಂ ನೌಕರರಿದ್ದು, ಒಟ್ಟು 525 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

199 ಹುದ್ದೆ ಖಾಲಿ

ಗದಗ-ಬೆಟಗೇರಿ ನಗರಸಭೆ ಒಂದರಲ್ಲೇ ಸಿ ಮತ್ತು ಡಿ ವೃಂದದಲ್ಲಿ ಒಟ್ಟು 199 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಸೀನಿಯರ್ ಪ್ರೋಗ್ರಾಮರ್-1, ಸಹಾಯಕ ಅಭಿಯಂತರರು-1, ಕಂದಾಯ ಅಧಿಕಾರಿ-1, ಅಕೌಂಟಂಟ್-1, ಕಿರಿಯ ಅಭಿಯಂತರರು-1, ಹಿರಿಯ ಆರೋಗ್ಯ ನಿರೀಕ್ಷಕರು-1, ಸ್ಟೆನೋಗ್ರಾಫರ್-2, ಪ್ರಥಮ ದರ್ಜೆ ಸಹಾಯಕ ಕಂದಾಯ ನಿರೀಕ್ಷಕರು-2, ಸಮುದಾಯ ಸಂಘಟಕರು-2, ವಾಟರ್ ಸಪ್ಲಾಯ್ ಆಪರೇಟರ್-16, ಡಾಟಾ ಎಂಟ್ರಿ ಆಪರೇಟರ್-4, ಕಿರಿಯ ಆರೋಗ್ಯ ನಿರೀಕ್ಷಕರು-3, ದ್ವಿತಿಯ ದರ್ಜೆ ಸಹಾಯಕರು-3, ಕ.ವ.ಸಹಾಯಕ-1, ವಾಹನ ಚಾಲಕರು-8, ಇಲೆಕ್ಟ್ರೀಶಿಯನ್ ಗ್ರೇಡ್-2 -1, ಲ್ಯಾಬ್ ಟೆಕ್ನಿಷಿಯನ್-1, ಪ್ಲಂಬರ್-1, ಸ್ಯಾನಿಟರಿ ಸುಫರವೈಸರ್-3 ಹಾಗೂ ಪೌರಕಾರ್ಮಿಕರು-126 ಹುದ್ದೆಗಳು ಖಾಲಿ ಇವೆ.

ಅದರಂತೆ ಗಜೇಂದ್ರಗಡ-36, ಲಕ್ಷ್ಮೇಶ್ವರ-52, ಮುಂಡರಗಿ-26, ನರಗುಂದ-39, ರೋಣ ಪುರಸಭೆಯಲ್ಲಿ-46 ಹಾಗೂ ಮುಳಗುಂದ-9, ನರೇಗಲ್-17 ಹಾಗೂ ಶಿರಹಟ್ಟಿ ಪಟ್ಟಣ ಪಂಚಾಯತಿಗಳಲ್ಲಿ 21 ಹುದ್ದೆಗಳು ಖಾಲಿ ಇವೆ.

ಗದಗ-ಬೆಟಗೇರಿ ನಗರಸಭೆ ಗ್ರೇಡ್-1 ಸಂಸ್ಥೆಯಾಗಿದೆ. ಇಲ್ಲಿ ಇಬ್ಬರಾದರೂ ಕಂದಾಯ ನಿರೀಕ್ಷಕರ ಆವಶ್ಯಕತೆ ಇದೆ. ಆದರೆ, ಒಬ್ಬನೇ ಒಬ್ಬ ಕಂದಾಯ ನಿರೀಕ್ಷಕರಿಲ್ಲ. ಮೂವರು ಎಂಜಿನಿಯರ್ ಬೇಕಾದಲ್ಲಿ, ಕೇವಲ ಒಬ್ಬರು ಎಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಗ್ರೇಡ್-1 ಸಂಸ್ಥೆಯದ್ದೇ ಈ ಗತಿಯಾದರೆ, ಇನ್ನುಳಿದ ಸಂಸ್ಥೆಗಳ ಪರಿಸ್ಥಿತಿ ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಸಿಬ್ಬಂದಿ ಕೊರತೆ

ಇನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಜೊತೆಗೆ ಕಚೇರಿ ಸಿಬ್ಬಂದಿ ಕೊರತೆಯೂ ಕಾಡುತಿದ್ದು, ಇದ್ದಿದ್ದರಲ್ಲೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಖಾಲಿಯಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನನುಕೂಲಗಳು ಆಗುತ್ತಿವೆ. ನೌಕರರ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗದೇ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿನ ಸಿಬ್ಬಂದಿ ಕೊರತೆಯ ಕುರಿತು ಪ್ರತಿ ತಿಂಗಳು ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಹೀಗಾಗಿ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳುವುದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆ.

ರಮೇಶ್ ಜಾಧವ್, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ

ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ನಮ್ಮಿಂದ ಸಾದ್ಯವಾದಷ್ಟು ಸಾರ್ವಜನಿಕರಿಗೆ ಕೆಲಸ ಮಾಡಿ ಕೊಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಬಿ ಮತ್ತು ಸಿ ವೃಂದದ ಸಿಬ್ಬಂದಿಗಳ ಅವಶ್ಯಕತೆ ತುಂಬಾ ಇದೆ. ಕಚೇರಿ ಸಿಬ್ಬಂದಿಯೇ ಕಡಿಮೆಯಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.

ಅನಿಲ್ ಕುಮಾರ್ ಮುದ್ದಾ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ

ಸರಕಾರ ಪ್ರತಿಯೊಂದನ್ನು ಆನ್‌ಲೈನ್ ಮೂಲಕವೇ ಅರ್ಜಿ ಹಾಕಿ ಪಡೆಯುವಂತಹ ವ್ಯವಸ್ಥೆ ಜಾರಿಯಲ್ಲಿದ್ದು, ಕಚೇರಿಯಲ್ಲಿ ಸರಿಯಾಗಿ ಸಿಬ್ಬಂದಿ ಇಲ್ಲದೆ ಜನರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದರಿಂದ ಜನರ ಅಲೆದಾಟ ನಿತ್ಯ ತಪ್ಪುತ್ತಿಲ್ಲ. ಯಾವುದೇ ಕೆಲಸಗಳು ಸರಾಗವಾಗಿ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ.

ರಾಘವೇಂದ್ರ ಯಳವತ್ತಿ, ನಗರಸಭೆ ಮಾಜಿ ಸದಸ್ಯ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!