ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ವಸತಿ ಕಲ್ಪಿಸುವಲ್ಲಿ ಸ್ಲಂ ಜನರನ್ನು ಕಡೆಗಣಿಸಿದರೆ ಜಿಲ್ಲಾ ಸ್ಲಂ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್.ಮಾನ್ವಿ ಎಚ್ಚರಿಕ್ಕೆ ನೀಡಿದ್ದಾರೆ.
ಅವರು ಜಿಲ್ಲಾ ಸ್ಲಂ ಸಮಿತಿಯ ಆವರಣದಲ್ಲಿ ಕರೆದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ ಹಲವಾರು ವರ್ಷಗಳಿಂದ ಗದಗ-ಬೆಟಗೇರಿ ನಗರದ ವಸತಿರಹಿತರಿಗೆ ಹಾಗೂ ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ಆಗ್ರಹಿಸಿ ಜಿಲ್ಲಾ ಸ್ಲಂ ಸಮಿತಿಯಿಂದ ಹಲವಾರು ಹೋರಾಟಗಳನ್ನು ನಡೆಸಿ ನಮ್ಮ ಭಾಗದ ಜನಪ್ರತಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಆದರೆ ಮೂಲ ವಸತಿರಹಿತರಿಗೆ ಹಾಗೂ ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ತಾರತಮ್ಯ ನೀತಿ ಅನುಸರಿಸುತ್ತಿರುವುದು ಜಿಲ್ಲಾ ಸ್ಲಂ ಸಮಿತಿಯಿಂದ ಖಂಡಿಸುತ್ತೇವೆ. ಈಗಾಗಲೇ ಘೋಷಿತ ಹಾಗೂ ಅಘೋಷಿತ ಸ್ಲಂಗಳ ಸರ್ವೇ ನಡೆಸಿರುವುದನ್ನು ಪರಿಗಣಿಸಿ ಕನಿಷ್ಠಮಟ್ಟದ ಸೌಲಭ್ಯವಿಲ್ಲದೇ ತಮ್ಮ ಬದುಕನ್ನು ನಡೆಸುತ್ತಿರುವ ಗುಡಿಸಲು ಕುಟುಂಬಗಳಿಗೆ ವಸತಿ ಯೋಜನೆಯನ್ನು ಮಂಜೂರು ಮಾಡಬೇಕು. ಸುಮಾರು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತ ಬಂದಿರುವ ನಗರದ ಮೂಲ ವಸತಿರಹಿತ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡುವ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.
ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ಮಾತನಾಡಿ, ವಸತಿರಹಿತ ಕುಟುಂಬಗಳ ಹೋರಾಟಗಳ ಮೂಲಕ ಎಚೆತ್ತುಕೊಂಡ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿ ಮನೆಗಳು ನಿರ್ಮಾಣ ಹಂತದಲ್ಲಿವೆ. ಮನೆ ಹಂಚಿಕೆಯ ಆಯ್ಕೆ ಪ್ರಕ್ರಿಯ ಸಂದರ್ಭದಲ್ಲಿ ನಿಜವಾದ ವಸತಿರಹಿತರ ಕುಟುಂಬಗಳನ್ನು ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಸ್ಲಂ ಸಮಿತಿಯಿಂದ ಅನಿರ್ದಿಷ್ಟ ಧರಣಿಸತ್ಯಾಗ್ರಹ ನಡೆಸಲಾಗುವುದು ಎಂದರು.
ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ ಮುಂದಿನ ಹೋರಾಟದ ರೂಪರೇಷಗಳ ಕುರಿತು ಮಾತನಾಡಿದರು. ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ವಿಶಾಲಕ್ಷಿ ಹಿರೇಗೌಡ್ರ, ಭಾರತಿ ಬಗಾಡೆ, ನಜಮುನಿಸಾ ಮುರಗೋಡ, ಪುಷ್ಪಾ ಬಿಜಾಪೂರ, ಹಸೀನಾ ಕೊಪ್ಪಳ, ಮರ್ದಾನಬಿ ಬಳ್ಳಾರಿ, ಯುವ ಸಮಿತಿ ಅಧ್ಯಕ್ಷ ವಿಕ್ರಮ.ಎಫ್.ಜಿ, ಜಾಫರ ಢಾಲಾಯತ, ಸಲೀಮ ಕದಡಿ, ಶರಣಪ್ಪ, ಚಾಂದಸಾಬ ಬದಾಮಿ ಹಾಗೂ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸ್ಲಂ ಜನರನ್ನು ಕಡೆಗಣಿಸಿದರೆ ಹೋರಾಟ
Advertisement