HomeCrime Newsಹಣ ಕೊಡು, ಇಲ್ಲವೇ ಆಸ್ತಿ ಬಿಡು! ಚಕ್ರಬಡ್ಡಿ, ಮೀಟರ್ ಬಡ್ಡಿ ಭಾರಕ್ಕೆ ನಲುಗುತ್ತಿದೆ ಬಡವರ ಬದುಕು

ಹಣ ಕೊಡು, ಇಲ್ಲವೇ ಆಸ್ತಿ ಬಿಡು! ಚಕ್ರಬಡ್ಡಿ, ಮೀಟರ್ ಬಡ್ಡಿ ಭಾರಕ್ಕೆ ನಲುಗುತ್ತಿದೆ ಬಡವರ ಬದುಕು

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

‘ಚಕ್ರ ಬಡ್ಡಿ, ಮೀಟರ್ ಬಡ್ಡಿ ಪ್ರಕರಣಗಳು ಬೆಳಕಿಗೆ ಬಂದಾಗ ಎಫ್‌ಐಆರ್ ದಾಖಲಿಸದೆ ರಾಜಿ ಸಂಧಾನ ಮಾಡಿ ಕಳುಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಬಡ್ಡಿ ವ್ಯವಹಾರ ಬೃಹತ್ ಮಟ್ಟದಲ್ಲಿ ಬೆಳೆದಿದ್ದು, ಬಡ್ಡಿ ವ್ಯವಹಾರಗಾರರೊಂದಿಗೆ ಪೊಲೀಸರು ಕೈಜೋಡಿಸಿದ್ದಾರೆ ಎಂಬ ಆಪಾದನೆಯನ್ನು ಜಿಲ್ಲೆಯ ಜನರು ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಬಡ್ಡಿ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದೆ. ಸರ್ಕಾರದ ಪರವಾನಗಿ ಪಡೆಯದೆ ಅನಧಿಕೃತವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿರುವವರ ಸಂಖ್ಯೆ ಇತ್ತೀಚೆಗೆ ದ್ವಿಗುಣಗೊಳ್ಳುತ್ತಿದೆ. ಕಷ್ಟ ಕಾಲದಲ್ಲಿ ಕೈಗಡ ಪಡೆದವರ ಗತಿ ಹರೋಹರ ಆಗುತ್ತಿದೆ. ಚಕ್ರ ಬಡ್ಡಿ, ಮೀಟರ್ ಬಡ್ಡಿ ದಂಧೆಕೋರರು ಹಣ ಕೊಡು, ಇಲ್ಲದಿದ್ದರೆ ಆಸ್ತಿ ಬಿಡು ಎಂದು ಪೀಡಿಸುವ ಕಾರಣಕ್ಕೆ ಮನನೊಂದು ಜನರು ಸಾವಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ.

ಗ್ರಾ.ಪಂ. ಮಾಜಿ ಅಧ್ಯಕ್ಷೆಯೇ ಬಲಿ

ಅಂತಹದ್ದೇ ಒಂದು ಘಟನೆ ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ನಡೆದಿತ್ತು. ತಾಲೂಕಿನ ಅಡವಿಸೋಮಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮೀಟರ್ ಬಡ್ಡಿ ವ್ಯವಹಾರದಿಂದ ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಬ್ಯಾಂಕ್ ಗಳಿಂದ ಸಾಲ ದೊರೆಯದಿರುವುದರಿಂದ ಖಾಸಗಿ ವ್ಯಕ್ತಿಗಳ ಅನಧಿಕೃತ ಫೈನಾನ್ಸ್ ಗಳಲ್ಲಿ ಜಿಲ್ಲೆಯ ಬಡ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ರೈತರು ಹೆಚ್ಚಾಗಿ ಸಾಲ ಪಡೆದು ಬಡ್ಡಿ ವ್ಯವಹಾರಕ್ಕೆ ಬಲಿಯಾಗುತ್ತಿದ್ದಾರೆ. ಕಿತ್ತು ತಿನ್ನುವ ಬಡತನದಿಂದಾಗಿ ದುಬಾರಿ ದುನಿಯಾದಲ್ಲಿ ಕುಟುಂಬ ನಿರ್ವಹಣೆ ಮಾಡಲಾಗದೆ, ಖಾಸಗಿ ವ್ಯಕ್ತಿಗಳಿಂದ ಕೈಗಡ ಪಡೆದು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರುವ ಜನರನ್ನು ಪೊಲೀಸರು  ರಕ್ಷಿಸಬೇಕಿದೆ.


ಹೊಸ ಹೊಸ ಷರತ್ತುಗಳು

ಬಡ್ಡಿ ವ್ಯವಹಾರಗಾರರು ಸಾಲ ಕೊಡುವ ಮುನ್ನ ಮನೆ, ನಿವೇಶನದಂತಹ ಆಸ್ತಿ ಪತ್ರ ನೀಡಿದರೆ ಸಾಕು, ಅರ್ಧರಾತ್ರಿಯಲ್ಲಿಯೂ ಕಂತೆ ಕಂತೆ ನೋಟು ಕೊಡುತ್ತಾರೆ. ಆದರೆ, ಸಾಲ ನೀಡುವಾಗ ಇಲ್ಲದ ಷರತ್ತುಗಳನ್ನು ಬಳಿಕ ಒಂದಾದೊಂದಾಗಿ ಸೇರಿಸಿ ,ಬಡವರ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾರೆ. ಬಡ್ಡಿ ಕಟ್ಟಲಾಗದಿದ್ದರೆ, ಮಾತಿಗೆ ಬಗ್ಗದಿದ್ದರೆ ರೌಡಿಶೀಟರ್ ಗಳಿಂದ ಬೆದರಿಕೆ ಹಾಕಿಸಿ ಸಾಲಗಾರರ ಆಸ್ತಿ ಕಬಳಿಸುತ್ತಿದ್ದು, ಮೀಟರ್ ಬಡ್ಡಿ ವ್ಯವಸ್ಥೆ ವಿರುದ್ಧ ಜಿಲ್ಲೆಯ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕುದುರೆಗಿಂತ ವೇಗವಾಗಿ ಓಡುತ್ತಿರುವ ತರಹವೇವಾರಿ ಬಡ್ಡಿ ವ್ಯವಹಾರಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂಬುವುದು ಜಿಲ್ಲೆಯ ಜನರ ಆಶಯ.

ಬಡ್ಡಿ ದಂಧೆಕೋರರು ಬಡವರಿಗೆ, ಬೀದಿ ವ್ಯಾಪಾರಿಗಳಿಗೆ, ರೈತರಿಗೆ ಕೊಟ್ಟ ಸಾಲದ ದಾಖಲೆಗಳು, ಅವರಿಂದ ಬರೆಸಿಕೊಂಡ ಪತ್ರಗಳನ್ನು ಮಾತ್ರ ಜೋಪಾನವಾಗಿ ಇರಿಸುತ್ತಾರೆ. ಯಾವುದೇ ಲೆಕ್ಕಪತ್ರಗಳನ್ನು ನಿರ್ವಹಿಸುವುದಿಲ್ಲ. ಹೀಗಾಗಿ, ಸರ್ಕಾರಕ್ಕೆ ನಯಾಪೈಸೆ ತೆರಿಗೆಯನ್ನೂ ಪಾವತಿಸುವುದಿಲ್ಲ. ಒಬ್ಬ ಬಡವನಿಂದ ವಸೂಲಿ ಮಾಡಿದ ಹಣವನ್ನು ತನ್ನ ಅಸಲನ್ನಾಗಿ ಮಾಡಿಕೊಂಡು, ಮತ್ತೊಬ್ಬ ಬಡವನಿಗೆ ಸಾಲ ಕೊಡುತ್ತಾರೆ. ಈ ಮೂಲಕ ತಾವು ಶ್ರೀಮಂತರಾಗಿ ಕೊಬ್ಬಿ ಮೆರೆಯುತ್ತಾರೆ. ಮೋಜು-ಮಸ್ತಿಯಲ್ಲಿ ತೊಡಗುತ್ತಾರೆ. ಅಂಥವರಿಗೆ ಬಡವರ ಕಣ್ಣೀರು ಕಾಣುವುದೇ ಇಲ್ಲ.

ವ್ಯವಹಾರ ಏಕೆ? ಹೇಗೆ?

ಖಾಸಗಿ ಲೇವಾದೇವಿ ವ್ಯವಹಾರಕ್ಕೆ ಬಡವರು, ಅನಕ್ಷರಸ್ಥರೇ ಬಲಿಯಾಗುವುದು ಹೆಚ್ಚು. ಬ್ಯಾಂಕುಗಳಲ್ಲಿ ಸಾಲ ಕೇಳಲು ಹೋದರೆ ಅಡಮಾನ ಇಡಲು ಆಸ್ತಿ ಕೇಳುತ್ತಾರೆ. ಜಾಮೀನಿಗೆ ಯಾರನ್ನಾದರೂ ಕರೆದುಕೊಂಡು ಬನ್ನಿ ಎನ್ನುತ್ತಾರೆ. ಹತ್ತಾರು ದಾಖಲೆಗಳನ್ನು ತರುವಂತೆ ಹೇಳಿ ನೂರಾರು ಬಾರಿ ಅಡ್ಡಾಡಿಸಿ ಹೈರಾಣು ಮಾಡುತ್ತಾರೆ. ಮಗಳ ಮದುವೆ. ಮನೆಯಲ್ಲಿ ಯಾರಿಗೋ ಹುಷಾರಿಲ್ಲ ಚಿಕಿತ್ಸೆ ಕೊಡಿಸಬೇಕು, ಹಬ್ಬಕ್ಕೆ ಏನೋ ವಸ್ತು ಖರೀದಿಸಬೇಕು, ಮನೆ ರಿಪೇರಿ ಮಾಡಿಸಬೇಕು- ಇತ್ಯಾದಿಗಳಿಗೆ ಬಡವರ ಬಳಿ ಹಣ ಇರುವುದಿಲ್ಲ, ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಹೀಗಾಗಿ, ಅನಿವಾರ್ಯವಾಗಿ ಬಡ್ಡಿ ಕುಳಗಳ ಬಳಿ ಕೈಯೊಡ್ಡುತ್ತಾರೆ. ಮೊದಲ ತಿಂಗಳ ಬಡ್ಡಿಯನ್ನು ಹಣ ಕೊಡುವಾಗಲೇ ಮುರಿದುಕೊಳ್ಳುವ ಈ ಕುಳಗಳು, ಅದಕ್ಕೂ ಸೇರಿಸಿ ಬಡ್ಡಿ ಲೆಕ್ಕ ಹಾಕಲು ಆರಂಭಿಸುತ್ತಾರೆ. ಐದು ಪರ್ಸೆಂಟ್ ಲೆಕ್ಕದವರೆಗೂ ಬಡ್ಡಿ ವ್ಯವಹಾರ ನಡೆಯುತ್ತಿದೆ.

ಬೀದಿ ವ್ಯಾಪಾರಸ್ಥರು ಇಂತಹ ಕುಳಗಳಿಂದ ಹಣ ಪಡೆದು, ದಿನವಿಡೀ ಬಿಸಿಲಲ್ಲಿ ನಿಂತು ವ್ಯಾಪಾರ ಮಾಡಿ ಗಳಿಸಿದ ಹಣವೆಲ್ಲ ಸಂಜೆ ಅನಾಯಾಸವಾಗಿ ಬಡ್ಡಿ ರೂಪದಲ್ಲಿ ಇಂಥ ದಂಧೆಕೋರರ ಜೇಬು ಸೇರುತ್ತದೆ. ಬೆಳಗ್ಗೆ ಮಾಲು ಹಾಕಲು ಮತ್ತೆ ಇವರ ಬಳಿಯೇ ಹಣ ಕೇಳುವ ಪರಿಸ್ಥಿತಿ. ಇಂತಹ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳುವ ಬಡ್ಡಿ ದಂಧೆಕೋರರು, ಬಡವರ ರಕ್ತ ಹೀರುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!