ಹನಿ/ತುಂತುರು ನೀರಾವರಿ ವಿತರಕರ ಬದುಕು ಬೀದಿಗೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದ ಸೂಕ್ಷ್ಮ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಏಕಾಏಕಿ ವಿತರಕರ ಬಿಲ್‌‌ಗಳನ್ನು ರದ್ದುಪಡಿಸಿದ್ದರಿಂದ ವಿತರಕರ ಬದುಕು‌ ಬೀದಿಗೆ ಬಿದ್ದಂತಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವೆಂಕನಗೌಡ ಮೇಟಿ ಅಳಲು ತೋಡಿಕೊಂಡರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1991ರಿಂದ ರೈತರಿಗಾಗಿ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಜಾರಿಗೆ ಬಂದಾಗಿನಿಂದ ವಿತರಕರಾಗಿರುವ ನಾವು, ಕಾರ್ಯಕ್ರಮವನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಹಗಲಿರುಳು ಎನ್ನದೆ ಇಲಾಖೆಯ ಜೊತೆ ಕೈ ಜೋಡಿಸಿ ಶ್ರಮಿಸಿದ್ದೇವೆ. ಜೊತೆಗೆ ಇದರಲ್ಲೇ ಭವಿಷ್ಯ‌ ಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಈಗ ಏಕಾಏಕಿ ನಮ್ಮ ಬಿಲ್‌ಗಳು ಬೇಕಿಲ್ಲ ಎಂದು ಸರಕಾರ ಹೇಳಿರುವುದರಿಂದ ಮುಂದೇನು ಎನ್ನುವ ಪ್ರಶ್ನೆ ಕಣ್ಮುಂದೆ ಬಂದು ತೀವ್ರ ಆತಂಕಕ್ಕೊಳಗಾಗಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 4 ಸಾವಿರ ವಿತರಕರಿದ್ದು, ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಂಪನಿಗಳ 50 ಜನ ವಿತರಕರಿದ್ದೇವೆ. ಇದುವರೆಗೂ ಸರಕಾರದಿಂದ ಬರಬೇಕಾದ 14-15 ಕೋಟಿ ರೂಪಾಯಿ ಬಾಕಿ ಇದೆ. ಈಗ ನಮ್ಮ ಬಿಲ್‌ಗಳನ್ನೇ ರದ್ದುಗೊಳಿಸಿರುವುದರಿಂದ ಚಿಂತಿತರಾಗಿದ್ದೇವೆ ಎಂದು ದುಃಖ ತೋಡಿಕೊಂಡರು.

ಈ ವೇಳೆ ಸಂಘದ ಬಸವರಾಜ ಅಳವಂಡಿ, ಮಂಜುನಾಥ ಮಾಳೆಕೊಪ್ಪ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here