ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ಹಿಂಗಾರು ಹಂಗಾಮು ಅಕ್ಟೋಬರ್ ಮೊದಲ ವಾರದಿಂದ ಆರಂಭ ಕಂಡಿದ್ದರೂ ನರಗುಂದ ತಾಲೂಕಿನ ಹೆಚ್ಚಿನ ಸಂಖ್ಯೆ ರೈತರು ಇನ್ನೂ ಭೂಮಿ ಹದಗೊಳಿಸಲು ತೊಂದರೆ ಅನುಭವಿಸುವಂತಾಗಿದೆ.
ಕಳೆದ ವರ್ಷದ ಹಿಂಗಾರು ಇದೇ ಅವಧಿಯಲ್ಲಿ ಶೇ. 20ರಷ್ಟು ಬಿತ್ತನೆಗೊಂಡಿತ್ತು. ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಹೆಚ್ಚಿನ ಮಳೆ ಕಂಡಿದ್ದರಿಂದ ಹಿಂಗಾರು ಹಂಗಾಮಿನ ತಿಥಿ ಮುಗಿಯುವುದರೊಳಗಾಗಿ ರೈತರು ಬಿತ್ತನೆ ಪೂರ್ಣಗೊಳಿಸಬೇಕಿದೆ. ಆದರೆ, ಹೆಚ್ಚಿನ ಮಳೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಅನೇಕ ಬೆಳೆಗಳನ್ನು ತಾಲೂಕಿನ ಕೊಣ್ಣೂರ ಬೂದಿಹಾಳ ಮತ್ತು ಕಪ್ಪಲಿ, ಕಲ್ಪಾಪೂರ, ಶಿರೋಳ, ವಾಸನ, ಬೆಳ್ಳೇರಿ, ಸುರಕೋಡ, ಮುಗನೂರ ಗ್ರಾಮದ ರೈತರು ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ಕಳೆದುಕೊಂಡು ತೊಂದರೆ ಅನುಭವಿಸುವಂತಾಗಿದೆ. ಕೊಣ್ಣೂರ, ವಾಸನ, ಬೆಳ್ಳೇರಿ ಮತ್ತು ಬೂದಿಹಾಳದ ರೈತರು ಬೆಳೆದ ತರಕಾರಿ, ಪೇರಲ ಮತ್ತು ಇತರ ಬೆಳೆಗಳು ಹಾನಿಗೊಂಡು ಆತಂಕ ಎದುರಿಸುತ್ತಿದ್ದಾರೆ.
ಬಿತ್ತನೆ ಬೀಜ ಲಭ್ಯ:
ಕೆಲವೇ ಕೆಲವು ಗ್ರಾಮೀಣ ಭಾಗಗಳ ರೈತರು ಹಿಂಗಾರು ಹಂಗಾಮಿಗೆ ಸೂರ್ಯಪಾನ ಬಿತ್ತನೆ ಮಾಡಿದ್ದಾರೆ. ಮಳೆಯ ಪರಿಣಾಮದಿಂದ ಅವರಿಗೂ ತೊಂದರೆ ತಪ್ಪಿಲ್ಲ. ಈ ನಡುವೆ ಅ. 9ರಿಂದ ಹಿಂಗಾರು ಹಂಗಾಮಿಗಾಗಿ ನರಗುಂದ ಹಾಗೂ ಕೊಣ್ಣೂರಿನ ಮತ್ತು ಟಿಎಪಿಸಿಎಂಎಸ್ ಹಾಗೂ ಸುರಕೋಡ ಗ್ರಾಮದ ರೈತ ಸೇವಾ ಕೇಂದ್ರದಲ್ಲಿ ಹಿಂಗಾರು ಬಿತ್ತನೆ ಬೀಜ ಒದಗಿಸಲಾಗುತ್ತಿದೆ.
ಸದ್ಯದ ಸ್ಥಿತಿಯಲ್ಲಿ ಕಡಲೆ ಮತ್ತು ಜೋಳದ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ನೀಡಲಾಗುತ್ತಿದೆ. ಸಾಮಾನ್ಯವರ್ಗದವರಿಗೆ ಕಡಲೆ 20 ಕೆಜಿ ಪ್ಯಾಕೇಟಿಗೆ 900 ರೂ., ಎಸ್‌ಟಿ/ಎಸ್‌ಟಿ ವರ್ಗದವರಿಗೆ 650 ರೂ., 3 ಕೆಜಿ ಜೊಳದ ಪ್ಯಾಕೇಟಿಗೆ ಸಾಮಾನ್ಯ ವರ್ಗಕ್ಕೆ 110 ರೂ., ಎಸ್‌ಸಿ/ಎಸ್‌ಟಿ ಜನಾಂಗಕ್ಕೆ 81 ರೂ. ದರದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಒದಗಿಸಲಾಗುತ್ತಿದೆ. ಗೋದಿ ಮತ್ತು ಸೂರ್ಯಪಾನ ಬೀಜಗಳು ಇನ್ನೂ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿಲ್ಲ. ಆ ಬೀಜಗಳನ್ನು ಆದಷ್ಟು ಶೀಘ್ರ ತರಿಸಿ ರೈತರಿಗೆ ಒದಗಿಸಲಾಗುವುದು ಎಂಧು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಹಿಂಗಾರು ಬಿತ್ತನೆಗೆ ಅಧಿಕ ಮಳೆ ಅಡ್ಡಿ
Advertisement