ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
‘ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. 17 ಜನ ರಾಜೀನಾಮೆ ಕೊಟ್ಟು ಬಂದ ಮೇಲೆ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂದು ಗೃಹ ಸಚಿವ ಬಸವರಾಜ್ ಬೊಮ್ಮೊಯಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ರಾಜ್ಯದಲ್ಲಿ ರಚಿಸುವಲ್ಲಿ ಸಹಾಯ ಮಾಡಿದವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ.
ಪಕ್ಷದ ಅಧಿಕೃತ ಯಾವುದೇ ವೇದಿಕೆಯಲ್ಲಿ ಗೊಂದಲವಿಲ್ಲ. ಸಚಿವ ಸಂಪುಟದ ಬಗ್ಗೆ ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ರಹಸ್ಯ ವಿಡಿಯೋ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ಕ್ಷಣ ಮೌನವಹಿಸಿ ಸಂತೋಷ ಗುಣಮುಖರಾದ ಮೇಲೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು.
ಕಳೆದ 35 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಬೇಡಿಕೆಯಿದ್ದು, ಈ ಬಗ್ಗೆ ಸರ್ಕಾರಗಳಿಗೆ ಮನವಿಗಳನ್ನೂ ಸಲ್ಲಿಸಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಸಮಗ್ರವಾಗಿ ಚಿಂತಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ನೇಮಕಾತಿ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದ್ದು, ಖಾಲಿ ಇರುವ ಹುದ್ದೆಗಳ ಭರ್ತಿ ಕಾರ್ಯ ನಡೆಯುತ್ತಿದೆ. ಇನ್ನೆರಡು ವರ್ಷಗಳಲ್ಲಿ ಇನ್ನುಳಿದ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಎನ್ ಡಿಪಿಎಸ್ ಕಾಯ್ದೆ ಪ್ರಕಾರ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕೆಲವರು ಜೈಲಿನಲ್ಲೂ ಇದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ, ಪ್ರದೀಪ್ ಶೆಟ್ಟರ್, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಯುವ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವರು ಇದ್ದರು.