ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಳೆಯಾದರೆ ಕೇಡಲ್ಲ, ಮನೆ ಮಗ ಉಂಡರೆ ಕೇಡಲ್ಲ ಎನ್ನುವ ಗಾದೆ ಮಾತು ಈ ಬಾರಿ ರೈತರ ಪಾಲಿಗೆ ಸುಳ್ಳಾಗುವಂತೆ ಕಾಣುತ್ತಿದೆ. ಏಕೆಂದರೆ, ಅತಿಯಾದ ಮಳೆಯಿಂದ ಮುದ್ರಣ ಕಾಶಿ ಗದಗ ಜಿಲ್ಲೆಯ ಅನ್ನದಾತರು ಸಂಕ?ಕ್ಕೆ ಈಡಾಗಿದ್ದಾರೆ. ಫಸಲು ಕೈ ಸೇರುವ ಸಮಯದಲ್ಲಿ ಅತಿಯಾದ ಮಳೆಯಿಂದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ.
ಮುದ್ರಣ ಕಾಶಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಉಂಟಾಗಿದೆ. ಫಸಲು ಪಡೆಯುವ ವೇಳೆಯಲ್ಲಿ ಅತಿಯಾದ ಮಳೆ ಸುರಿದಿದ್ದರಿಂದ ಬೆಳೆದು ನಿಂತಿರುವ ಹಾಗೂ ಕಿತ್ತು ಹಾಕಿರುವ ಶೇಂಗಾ ಜಮೀನಿನಲ್ಲಿ ಕೊಳೆಯುತ್ತಿದೆ. ತಮಗೆ ಸೂಕ್ತ ಪರಿಹಾರ ನೀಡುವಂತೆ ಅನ್ನದಾತರು ಒತ್ತಾಯ ಮಾಡುತ್ತಿದ್ದಾರೆ.
ಹೌದು. ಗದಗ ಜಿಲ್ಲೆಯ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಅತಿಯಾದ ಮಳೆಯಿಂದ ಬೆಳೆದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ.
ಸರ್ಕಾರ ನೆರವಿಗೆ ಬರಲಿ
ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದ್ದು, ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದವು. ಇನ್ನೇನು ಫಸಲು ಕೈ ಸೇರುವ ಸಮಯದಲ್ಲಿ ವರುಣನ ಆರ್ಭಟಕ್ಕೆ ಬೆಳೆದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ. ಬೆಳೆ ನಾಶವಾಗಿದ್ದು, ಸರ್ಕಾರ ನಮ್ಮ ನೆರವಿಗೆ ಬರಲಿ ಎಂದು ಬೆಳೆ ಹಾನಿ ಅನುಭವಿಸಿದ ರೈತ ರುದ್ರಗೌಡ ಪಾಟೀಲ ಆಗ್ರಹಿಸಿದ್ದಾರೆ.
ಅಂದ ಹಾಗೆ ಗದಗ ಜಿಲ್ಲೆಯ ಮುಳಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಮುಂತಾದ ಭಾಗಗಳ ರೈತರು ಬೆಳೆದ ಶೇಂಗಾ ನಾಶವಾಗಿದೆ. ಫಸಲು ಕೊಡುವ ಸಮಯವಾದ್ದರಿಂದ ರೈತರು ಶೇಂಗಾ ಕಟಾವು ಮಾಡಿ ರಾಶಿ ಮಾಡಿ, ಮಾರಾಟ ಮಾಡುವ ಸಿದ್ಧತೆಯಲ್ಲಿದ್ದರು. ಆದರೆ, ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರೈತರು, ರೈತ ಕಾರ್ಮಿಕರು ಜಮೀನುಗಳಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶೇಂಗಾ ಬೆಳೆ ಜಮೀನಿನಲ್ಲಿ ಕೊಳೆಯುತ್ತಿದೆ. ಅತಿಯಾದ ಮಳೆಯಿಂದ ಇನ್ನುಳಿದ ಶೇಂಗಾ ಕಟಾವು ಮಾಡದ ಸ್ಥಿತಿ ನಿರ್ಮಾಣವಾಗಿದೆ. ಒಂದು ಎಕರೆ ಶೇಂಗಾಕ್ಕೆ 15ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಿದರೂ ಬೆಳೆದ ಬೆಳೆ ರೈತರ ಕೈಗೆ ಬರುತ್ತಿಲ್ಲ. ಹೀಗಾಗಿ ಅತಿವೃಷ್ಟಿ ಪರಿಹಾರ ನೀಡಬೇಕೆಂದು ರೈತರು ಒತ್ತಾಯ ಮಾಡುತ್ತಿದ್ದಾರೆ.
ಬೆಂಬಲ ಬೆಲೆ, ವಿಮೆ ಕೊಡಿಸಲಿ: ಈ ಭಾಗದ ಹೆಸರು ಬೆಳೆ ಭಾಗಶಃ ಭೂತಾಯಿಯ ಮಡಿಲು ಸೇರಿ, ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದರು. ಶೇಂಗಾ ಬೆಳೆ ಸಮೃದ್ಧವಾಗಿ ಬೆಳದಿದ್ದು, ಆರ್ಥಿಕವಾಗಿ ಲಾಭ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿರುವಾಗ ಸತತ ಮಳೆಯಾಗಿದ್ದರಿಂದ ಶೇಂಗಾ ಬೆಳೆ ಜಮೀನಿನಲ್ಲಿ ಕೊಳೆಯುತ್ತಿದೆ. ಇನ್ನು ಹತ್ತಿ, ಮೆಣಸಿನಕಾಯಿ, ಗೋವಿನ ಜೋಳ, ಈರುಳ್ಳಿ ಬೆಳೆ ಸಹ ಅತಿಯಾದ ಮಳೆಯಿಂದ ಹಳದಿ ರೋಗಕ್ಕೆ ತುತ್ತಾಗಿವೆ. ಈಗ ಶೇಂಗಾ ಕಟಾವು ಮಾಡುವ ಸಮಯ. ಆದರೆ, ನಿರಂತರ ಮಳೆಯಿಂದ ಶೇಂಗಾ ನಾಶವಾಗಿದೆ. ಅಳಿದುಳಿದ ಶೇಂಗಾವನ್ನು ರಾಶಿ ಮಾಡಬೇಕು ಅಂದರೆ ಶೇಂಗಾ ಜೊತೆಗೆ ಮಣ್ಣು ಬರುತ್ತಿದೆ. ಹೀಗಾಗಿ ರೈತರು ಶೇಂಗಾ ಬೆಳೆಯ ರಾಶಿಯನ್ನು ಮಾಡಲು ಪರದಾಡುತ್ತಿದ್ದಾರೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಮಣ್ಣಲ್ಲಿ ಮಣ್ಣಾಗುತ್ತಿದೆ. ಶೇಂಗಾ ಬೆಳೆ ವಿಮೆ ಮಾಡಿಸಲಾಗಿದ್ದು, ಸರ್ಕಾರ ನಮಗೆ ವಿಮೆ ಹಾಗೂ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು ಎಂದು ಬೆಳೆ ಹಾನಿಯಾದ ರೈತ ಚಂದ್ರಶೇಖರಗೌಡ ಆಗ್ರಹಿಸಿದ್ದಾರೆ.