ಮೈಸೂರು: ಚಾಮುಂಡೇಶ್ವರಿ ದೇವರ ಆಷಾಢ ಶುಕ್ರವಾರ ವಿಶೇಷ ದರ್ಶನಕ್ಕೆ 2000 ರೂ. ಶುಲ್ಕ ವಿಧಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಭಾರೀ ವಿರೋಧಕ್ಕೆ ಗುರಿಯಾಗಿದೆ. ಈ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.
ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಸೇನೆ ಪಡೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡಲಾಗುತ್ತಿದೆ ಮತ್ತು ಭಕ್ತರ ಭಾವನೆಗಳನ್ನು ಲೆಕ್ಕಿಸದೇ ಹಣ ವಸೂಲಿ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನಾಕಾರರು ಆಷಾಢ ಮಾಸದಲ್ಲಿ ದೇವಿಯ ದರ್ಶನಕ್ಕೆ ಬರುವ ಭಕ್ತರನ್ನು ಕಡೆಗಣಿಸಿ, 2000 ರೂ. ಟಿಕೆಟ್ ಮೂಲಕ ಪ್ರವೇಶವನ್ನು ನಿಯಂತ್ರಿಸುವುದು ಅನ್ಯಾಯ ಎಂದು ಹೇಳಿದ್ದಾರೆ. ಹಿಂದಿನ 50 ರೂ. ಹಾಗೂ 300 ರೂ. ದರ್ಶನ ವ್ಯವಸ್ಥೆಯನ್ನು ರದ್ದುಪಡಿಸಿರುವುದು ಸಾಮಾನ್ಯ ಭಕ್ತರಿಗೆ ದೊಡ್ಡ ಹೊಡೆತವಾಗಿದೆ ಎಂದು ದೂರಿದ್ದಾರೆ.
ಚಾಮುಂಡಿ ಬೆಟ್ಟವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಇದನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. “ತಿರುಪತಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಇಂತಹ ಭಾರಿ ಶುಲ್ಕ ಇಲ್ಲ” ಎಂದು ಪ್ರತಿಭಟನಾಕಾರರು ಹೋಲಿಕೆ ಮಾಡಿದ್ದಾರೆ.
ಸರ್ಕಾರ ತಕ್ಷಣ 2000 ರೂ. ವಿಶೇಷ ದರ್ಶನ ಶುಲ್ಕವನ್ನು ಹಿಂಪಡೆಯಬೇಕು ಮತ್ತು ಹಿಂದಿನ ದರ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗಿದೆ.



