ವಿಜಯಸಾಕ್ಷಿ ಸುದ್ದಿ, ಗದಗ
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಳ್ಳದಂಧೆಯ ಮೂಲಕ ಸಾಗಾಟ ಮಾಡುವ ಹೊಸದೊಂದು ಜಾಲ ಗದಗ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆಯೇ? ಎಂಬ ಪ್ರಶ್ನೆಗೆ ಇತ್ತೀಚೆಗೆ ಪೊಲೀಸರು ಭೇದಿಸಿದ ಪ್ರಕರಣಗಳೇ ಸಾಕ್ಷಿಯಾಗಿವೆ.
ರಾಜಾರೋಷವಾಗಿ ನಡೆಯುತ್ತಿದ್ದ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಟದ ದಂಧೆಗೆ ಕಳೆದ ಫೆಬ್ರವರಿಯಲ್ಲಿಯೇ ಕಡಿವಾಣ ಬಿದ್ದಿದೆ. ಆದರೆ ಈಗ ಅಲ್ಲಲ್ಲಿ ಹೊಸಬರು ಈ ದಂಧೆಗೆ ಎಂಟ್ರಿಕೊಟ್ಟಿದ್ದಾರೆ. ಅವರನ್ನು ರೌಡಿ ಶೀಟರ್ಸ್ ಹುರಿದು ಮುಕ್ಕುತ್ತಿದ್ದಾರೆ.
ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ನಡೆದ ಬೆಳವಣಿಗೆ. ಗದಗನ ಗಂಗಿಮಡಿ ಸರ್ಕಲ್, ಬಿಂಕದಕಟ್ಟಿ, ಮುಂಡರಗಿ ತಾಲೂಕಿನ ಡಂಬಳ, ಹಿರೇವಡ್ಡಟ್ಡಿಯಲ್ಲಿ ಅನ್ನಭಾಗ್ಯ ಅಕ್ಕಿ ಸಿಕ್ಕಿದೆ. ಆ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಆದರೆ ಈಗ ಗದಗ- ಬೆಟಗೇರಿ ಅವಳಿ ನಗರದಲ್ಲಿ ಸದ್ದಿಲ್ಲದೆ ದಂಧೆ ಕರಾಳ ಹಸ್ತ ಚಾಚಿಕೊಂಡಿದೆ.
ಹುಬ್ಬಳ್ಳಿ, ಹಾವೇರಿಗೆ ಕಳಿಸುತ್ತಾರೆ
ಬೆಟಗೇರಿಯ ನೇಕಾರನಗರ, ಮಂಜುನಾಥ್ ನಗರ, ಹುಯಿಲಗೋಳ ರೋಡ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿ ಮನೆಯ ಅಕ್ಕಿಯನ್ನು ನೇಕಾರನಗರದ ನಾಗರಾಜ್ ಕೆಂಜಿಗುಂಡಿ ಎಂಬಾತ ಖರೀದಿಸಿ, ತನ್ನ ಸಹಚರನ ಮುಖಾಂತರ ಹಾವೇರಿಗೆ ಕಳಿಸುತ್ತಾನೆ. ಹಾಗೆಯೇ ಗದಗನಲ್ಲೂ ಒಂದಿಷ್ಟು ಪುಂಡ ಪೋಕರಿಗಳು ದಾಸರ ಓಣಿ, ಗಂಗಿಮಡಿ, ಒಕ್ಕಲಗೇರಿ, ರಹಮತ್ ನಗರ, ಖಾನ್ ತೋಟ್ ಮುಂತಾದೆಡೆ ಅಕ್ಕಿ ಸಂಗ್ರಹಿಸಿ ಅಣ್ಣಿಗೇರಿ ಮೂಲಕ ಹುಬ್ಬಳ್ಳಿ, ಹಾವೇರಿಗೆ ಕಳಿಸುತ್ತಾರೆ. ಹಾವೇರಿಯ ಸಚಿನ್ ಎಂಬಾತ ದೊಡ್ಡ ಮೊತ್ತ ನೀಡಿ ಈ ಅಕ್ಕಿ ಖರೀದಿಸುತ್ತಾನೆ.

ಈ ರೀತಿ ಅಕ್ಕಿ ದಂಧೆ ಎರಡು ತಿಂಗಳಿನಿಂದ ಜೋರಾಗಿದೆ. ರಾತ್ರಿ ಆದರೆ ಸಾಕು, ಒಂದೊಂದೇ ವಾಹನ ಅಕ್ಕಿ ತುಂಬಿಕೊಂಡು ಹೊರಗೆ ಬೀಳುತ್ತವೆ. ಅಶೋಕ ಲೈಲ್ಯಾಂಡ್, ಬೋಲೆರೋ, ಟಾಟಾಏಸ್ ಮೂಲಕ ಅಕ್ಕಿ ಸಾಗಾಟ ಎಗ್ಗಿಲ್ಲದೆ ನಡೆಯಿತ್ತದೆ.
ರೌಡಿ ಶೀಟರ್ಸ್ ಹಾವಳಿ
ಕೆಲವು ರೌಡಿಗಳು, ಪುಂಡ-ಪೋಕರಿಗಳು ಈ ದಂಧೆಗೆ ಸಾಥ್ ನೀಡ್ತಾರೆ. ಕೆಲವೊಮ್ಮೆ ತಮ್ಮ ವಾಹನ ಬಿಟ್ಟು ಬೇರೆಯವರ ಅಕ್ಕಿ ತುಂಬಿದ ವಾಹನಗಳು ಹೊರಟರೆ ಅವುಗಳನ್ನು ಹಿಡಿದು ದುಡ್ಡು ವಸೂಲಿ ಮಾಡುತ್ತಾರೆ. ಹೀಗೆ ಗುರುವಾರ ಮಧ್ಯರಾತ್ರಿ, ಸಮೀಪದ ಅಡವಿ ಸೋಮಾಪುರ ಹಾಗೂ ಮುಳಗುಂದ ನಾಕಾ ಬಳಿ ವಾಹನ ಹಿಡಿದಿದ್ದಾರೆ. ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದಾರೆ. ಕೊಡದಿದ್ದರೆ ಪೊಲೀಸರಿಗೆ ಮಾಹಿತಿ ನೀಡ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ಶುಕ್ರವಾರ ಬೆಳಗಿನವರೆಗೂ ಚೌಕಾಸಿ ನಡೆದು ಕೊನೆಗೂ ಒಂದು ಅಮೌಂಟ್ ಕೊಡುವ ಒಪ್ಪಂದಕ್ಕೆ ಬಂದ ಅನಂತರವೇ ವಾಹನಗಳನ್ನು ಬಿಟ್ಟಿದ್ದಾರೆ.
ಇದು ಸ್ಯಾಂಪಲ್ ಮಾತ್ರ. ಇನ್ನೂ ಹಲವು ಬಾರಿ ಇಂತಹ ಘಟನೆಗಳು ನಡೆದರೂ ಪೊಲೀಸರ ಗಮನಕ್ಕೆ ಬರುತ್ತಿಲ್ಲ.
ಕಳ್ಳತನ ಪ್ರಕರಣಗಳಲ್ಲೂ ಭಾಗಿ
ಜಿಲ್ಲೆಯಲ್ಲಿ ಈಗ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಎರಡು ತಿಂಗಳಿನಿಂದ ಗದಗ-ಬೆಟಗೇರಿ ಭಾಗದಲ್ಲಿ ಮನೆ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಕೇಶವ ನಗರದಲ್ಲಿ ಮುಂಬಾರಡ್ಡಿ ಎಂಬುವರ ಮನೆ ಹಾಡುಹಗಲೇ ಕಳ್ಳತನವಾಗಿತ್ತು. ರೋಣ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡದಲ್ಲೂ ಮನೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.
ಇತ್ತೀಚೆಗೆ ಲಕ್ಷ್ಮೇಶ್ವರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಆದರೆ ಗದಗನಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು ಇನ್ನೂ ಸಿಕ್ಕಿಲ್ಲ. ಇಂತಹ ಘಟನೆಗಳನ್ನು ತಡೆಯಬೇಕಾದರೆ ರೌಡಿ ಶೀಟರ್‌ಗಳ ಅಟಾಟೋಪಕ್ಕೆ ಕಡಿವಾಣ ಹಾಕಬೇಕು. ಆದರೆ ಗದಗನಲ್ಲಿ ಅಂತಹ ಲಕ್ಷಣಗಳು ಕಾಣುತ್ತಿಲ್ಲ.
ಏನೆ ಆಗಲಿ ಮುಂದಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿ ಶೀಟರ್‌ಗಳಿಗೆ ಪರೇಡ್ ಆದರೂ ನಡೆಸಲಿ. ಅವರ ಚಲನವಲನಗಳ ಮೇಲೆ ಕಣ್ಣಿಡಲಿ. ಅವರ ಜೊತೆಗೆ ರಾತ್ರಿ ಇರುವ ಜೊತೆಗಾರರು ಯಾರು? ಪತ್ತೆ ಹಚ್ಚಿ ಒಂದಿಷ್ಟಾದರೂ ಬುದ್ಧಿ ಕಲಿಸಲು ಮುಂದಾಗಬೇಕು. ಅಂದಾಗ ಮಾತ್ರ ರೌಡಿ ಶೀಟರ್‌ಗಳ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಬೀಳಬಹುದು.