ಬಿಗ್ ಬಾಸ್ ಮನೆಯಲ್ಲಿ ಮಾತಿನ ಮಲ್ಲಿ ಮಲ್ಲಮ್ಮ ಅವರ ಆಟ ಕೊನೆಗೊಂಡಿದೆ. ಈ ವಾರ ಕಡಿಮೆ ವೋಟ್ ಪಡೆದ ಕಾರಣ ಮಲ್ಲಮ್ಮ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ.
ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ವದಂತಿ ಹರಿದಾಡಿದ್ದು ಆ ಬಳಿಕ ಇದು ಸುಳ್ಳು ಸುದ್ದಿ ಅನ್ನೋದು ಗೊತ್ತಾಗಿತ್ತು. ಇದೀಗ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಅಧಿಕೃತವಾಗಿ ಔಟ್ ಆಗಿರುವುದು ದೃಢಪಟ್ಟಿದೆ.
ಆರಂಭದ ದಿನಗಳಲ್ಲಿ ಟಾಸ್ಕ್ಗಳನ್ನು ಅರ್ಥಮಾಡಿಕೊಳ್ಳಲು ಮಲ್ಲಮ್ಮ ಅವರಿಗೆ ಸ್ವಲ್ಪ ಕಷ್ಟವಾಗುತ್ತಿತ್ತು. ಅದರ ಜೊತೆಗೆ ಮನೆಯ ಸದಸ್ಯರು ಅವರ ಮಾತಿಗೆ ಅಷ್ಟಾಗಿ ಮಹತ್ವ ನೀಡುತ್ತಿರಲಿಲ್ಲ. ಈ ವಿಷಯದ ಕುರಿತು ಸುದೀಪ್ ಅವರು ಮನೆಯ ಸದಸ್ಯರನ್ನೇ ತರಾಟೆಗೆ ತೆಗೆದುಕೊಂಡಿದ್ದರು.
ಮಲ್ಲಮ್ಮ ಹೆಚ್ಚಾಗಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಜೊತೆಗೆ ಸಮಯ ಕಳೆಯುತ್ತಿದ್ದರು. ಈ ವಾರದ ಟಾಸ್ಕ್ನಲ್ಲಿಯೂ ಅವರು ತಮಗಾದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಎನ್ನಲಾಗಿದೆ.
ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಜೊತೆ ಮಾತನಾಡುವಾಗ “ನಾನು ಕಾಲೇಜಿಗೆ ಹೋಗಿರಲಿಲ್ಲ” ಎಂದು ಹೇಳಿ ಮಲ್ಲಮ್ಮ ಕಣ್ಣೀರಿಟ್ಟ ಕ್ಷಣ ಪ್ರೇಕ್ಷಕರ ಮನ ಗೆದ್ದಿತ್ತು.
ಭಾನುವಾರದ ಎಪಿಸೋಡ್ನಲ್ಲಿ ಗಿಲ್ಲಿ, ಅಶ್ವಿನಿ, ರಾಶಿಕಾ, ಧ್ರುವಂತ್, ಧನುಶ್, ಸ್ಪಂದನಾ ಅವರುಗಳು ಸೇಫ್ ಆದರು. ಕೊನೆಯದಾಗಿ ಮಾಳು ಮತ್ತು ಮಲ್ಲಮ್ಮ ಇಬ್ಬರೂ ಉಳಿದುಕೊಂಡರು. ಆಗ ಸುದೀಪ್ ನೀವು ಇಬ್ಬರೂ ಸಹ ಬಿಗ್ಬಾಸ್ ಮನೆಯ ವಿಶೇಷ ಸ್ಪರ್ಧಿಗಳು, ಆರ್ಥಿಕ ಹಿನ್ನೆಲೆ ಇಲ್ಲದೆ, ಹಲವು ಕಷ್ಟಗಳನ್ನು ಮೆಟ್ಟಿನಿಂತು ನಿಮ್ಮ ಸ್ವಂತ ವ್ಯಕ್ತಿತ್ವದಿಂದ ಬಿಗ್ಬಾಸ್ ಮನೆಗೆ ಬಂದಿದ್ದೀರಿ, ಇಬ್ಬರಲ್ಲಿ ಯಾರು ಹೊರ ಬಂದರೂ ಸಹ ಸಾಧನೆ ಮಾಡಿ ಹೊರ ಬಂದಿದ್ದೀರಿ ಎಂದೇ ಅರ್ಥ ಎಂದರು. ಬಳಿಕ ಯಾರ ವಿಡಿಯೋ ಹಾಕಲಾಗುತ್ತದೆಯೋ ಅವರು ಔಟ್ ಎಂದರ್ಥ ಎಂದರು. ಎಲ್ಲರೂ ಕುತೂಹಲದಿಂದ ಕಾಯಬೇಕಾದರೆ ಮಲ್ಲಮ್ಮನ ವಿಡಿಯೋ ಪ್ಲೇ ಆಯ್ತು. ಆ ಮೂಲಕ ಮಲ್ಲಮ್ಮ ಹೊರ ಹೋಗುವುದು ಖಚಿತವಾಯ್ತು.
ಬಿಗ್ಬಾಸ್, ಮಲ್ಲಮ್ಮನಿಗೆ ವಿಶೇಷ ಬೀಳ್ಕೊಡುಗೆಯನ್ನು ನೀಡಿದರು. ಅವರಿಗಾಗಿ ಲೈಟುಗಳ ಒಂದು ವಿಶೇಷ ಚಪ್ಪರ ಆಯೋಜಿಸಿ ಅದರ ಕೆಳಗೆ ಅವರನ್ನು ನಿಲ್ಲಿಸಿ ಮಾತನಾಡಿದ ಬಿಗ್ಬಾಸ್, ‘ಬಿಗ್ಬಾಸ್ ಮನೆಗೆ ನೂರಾರು ಮಂದಿ ಸ್ಪರ್ಧಿಗಳು ಬಂದಿದ್ದಾರೆ ಆದರೆ ಅವರೆಲ್ಲರಿಗಿಂತಲೂ ನೀವು ಭಿನ್ನ. ಬಿಗ್ಬಾಸ್ ಮನೆಗೆ ಬರಲು ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಅಗತ್ಯ ಇಲ್ಲ ವ್ಯಕ್ತಿತ್ವ ಇದ್ದರೆ ಸಾಕೆಂದು ತೋರಿಸಿದ್ದೀರಿ ಮಾತ್ರವಲ್ಲ ವಯಸ್ಸು ಸಹ ಅಡ್ಡಿಯಲ್ಲ ಎಂಬುದನ್ನು ತೋರಿಸಿದ್ದೀರಿ. ನೀವು ಪ್ರಜ್ಞಾವಂತ ಸ್ಪರ್ಧಿ ಆಗಿದ್ದೀರಿ, ನೀವು ಬಿಗ್ಬಾಸ್ ಮನೆಯ ಹೆಮ್ಮೆಯ ಸ್ಪರ್ಧಿ, ಈ ಮನೆ ಸದಾ ನಿಮ್ಮದೇ, ಬಿಗ್ಬಾಸ್ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಿಮ್ಮ ಹೊರಗಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು.


