ವಿಜಯಸಾಕ್ಷಿ ಸುದ್ದಿ, ಗದಗ
ಪ್ರೀತಿಸಿ ಮದುವೆಯಾಗುವದಾಗಿ ನಂಬಿಸಿ, ಪುಸಲಾಯಿಸಿ ಯುವತಿಯೊಬ್ಬಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವೊಂದರ ಕುರಿತು ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಎಸ್ಸಿ ಶಿವಪ್ರಕಾಶ್ ದೇವರಾಜು ಹೇಳಿದರು.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಪ್ರಾಪ್ತ ಯುವತಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಆರೋಪಿ ಕಾರ್ತಿಕ ಶಿವಯೋಗಿ ಹೀರೇಮಠ(24ವರ್ಷ) ಎಂಬ ಯುವಕ, ಎಲ್ಲಿಯಾದರೂ ಓಡಿಹೋಗಿ ಮದುವೆಯಾಗೋಣ ಎಂದು ಫೋನಿನಲ್ಲಿ ತಿಳಿಸಿ, ನರಗುಂದದ ನೀರಾವರಿ ಕಾಲೋನಿಯಲ್ಲಿರುವ ರಾಮಣ್ಣ ದುರಗಪ್ಪ ಚಲವಾದಿ ಇವರ ಮನೆಯ ಹತ್ತಿರ ರಸ್ತೆಯ ಮೇಲೆ ಯುವತಿಯನ್ನು ಭೇಟಿ ಮಾಡಿ ನಂಬಿಸಿ, ತಾನು ಬಾಡಿಗೆಗೆ ಪಡೆದುಕೊಂಡ ಕಾರಿನಲ್ಲಿ ಹತ್ತಿಸಿಕೊಂಡು ಅಪಹರಣ ಮಾಡಿಕೊಂಡು ಹೋದ ಘಟನೆ ಡಿಸೆಂಬರ್ 2, 2017ರಂದು ಮದ್ಯಾಹ್ನ 3ಗಂಟೆ ಸುಮಾರಿಗೆ ನಡೆದಿತ್ತು. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಚಿಕ್ಕನರಗುಂದದ ಪಂಚಮಿ ಮಹಿಳಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕಾ ಮಹಿಳಾ ಸಾಂತ್ವನ ಕೇಂದ್ರದ ಭಾರತಿ ರವಿ ಹೊಂಗಲ ಇವರು ದಿ: 5-12-2017ರಂದು ದೂರು ನೀಡಿದ್ದರು ಎಂದು ಎಸ್ಸಿ ಶಿವಪ್ರಕಾಶ್ ಹೇಳಿದರು.
ಸದರಿ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಆರೋಪಿ ಕಾರ್ತಿಕ್ ಈತ ಅಪ್ರಾಪ್ತಳ ಮೇಲೆ ಲೈಂಗಿಕ ಹಲ್ಲೆ ನಡೆಸಿರುವ ಬಗ್ಗೆ ಕಾನೂನು ಕ್ರಮ ಕೈಗೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನರಗುಂದ ಪೊಲೀಸ್ ಠಾಣೆಯ ತನಿಖಾಧಿಕಾರಿ ಪಿಐ ಗಿರೀಶ.ಪಿ. ರೋಡಕರ್ ತನಿಖೆ ಮುಂದುವರೆಸಿ, ಪ್ರಕರಣ ಪೂರ್ತಿಗೊಳಿಸಿ ದಿ: 30-3-2018ರಂದು ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗದಲ್ಲಿ ಎಸ್.ಸಿ ನಂ: 47/2018ನೇದರಲ್ಲಿ ವಿಚಾರಣೆ ನಡೆಸಿ, ಆರೋಪಿತನಿಗೆ 30.07.2022ರಂದು ಮೂರು ವರ್ಷಗಳ ಕಠಿಣ ಶಿಕ್ಷೆ ಹಾಗೂ 35,000ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸದರಿ ಪ್ರಕರಣದಲ್ಲಿ ಎಲ್ಲ ಸಾಕ್ಷಿದಾರರು ಸಂತ್ರಸ್ತ ಯುವತಿಯ ಪರವಾಗಿ ಸಾಕ್ಷಿ ನುಡಿದಿದ್ದರಿಂದ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ(ಪೋಕ್ಸೋ) ಅಮರೇಶ ಹಿರೇಮಠ ಸರ್ಕಾರದ ಪರವಾಗಿ ವಾದ ನಡೆಸಿ ಆರೋಪಿತನಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ.
ಸಾರ್ವಜನಿಕರು ಕೂಡ ಹೆಚ್ಚಿನ ರೀತಿಯಲ್ಲಿ ನೊಂದವರ ಪರವಾಗಿ ಸಾಕ್ಷಿ ನುಡಿದಲ್ಲಿ ಆರೋಪಿಗಳಿಗೆ ಹೆಚ್ಚಿನ ಹಾಗೂ ಶೀಘ್ರವಾಗಿ ಶಿಕ್ಷೆ ವಿಧಿಸಲು ಅನುಕೂಲವಾಗುತ್ತದೆ. ನಿಯಮಾನುಸಾರ ಕ್ರಮ ಜರುಗಿಸಿದ ತನಿಖಾಧಿಕಾರಿಗಳಿಗೆ ಹಾಗೂ ನರಗುಂದ ಪೊಲೀಸ್ ಠಾಣೆಯ ಸಿಬ್ಬಂದಿಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


