ಅವೈಜ್ಞಾನಿಕ ಕಾಮಗಾರಿಯಿಂದ ಜನ ಸಂಕಷ್ಟಕ್ಕೆ, ಶಾಸಕರೇ ಇದಕ್ಕೆಲ್ಲ ಹೊಣೆ; ಅನಿಲ ಮೆಣಸಿನಕಾಯಿ ಕಿಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ‌ ನಗರದ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದರಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆಯ ಬಾಗಿಲಿಗಿಂತ ಎತ್ತರದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಿರುವುದರಿಂದ ಮನೆಯೊಳಗೆ ಮಳೆ ನೀರು ನುಗ್ಗುತ್ತಿದೆ. ಶಾಸಕರ ದೂರದೃಷ್ಟಿಯ ಕೊರತೆ ಹಾಗೂ ನಿಷ್ಕಾಳಜಿಯಿಂದಾಗಿ ಗದಗ-ಬೆಟಗೇರಿಯ ಜನರು ಇಂದಿಗೂ ಪರಿತಪಿಸುವಂತಾಗಿದೆ. ಆದರೆ, ಈ ಪರಿಸ್ಥಿತಿ ಹುಲಕೋಟಿ ಗ್ರಾಮದಲ್ಲಿಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.

ಅವರು, ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಗದಗ-ಬೆಟಗೇರಿ ಅವಳಿ ನಗರದ ಮಂಜುನಾಥ ನಗರ ಹಾಗೂ ಭಜಂತ್ರಿ ಓಣಿಗೆ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಅವರ ಜೊತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರ ವಿರುದ್ಧ ಹರಿಹಾಯ್ದರು.

ರಾಜಕಾಲುವೆಗಳ ಪಕ್ಕ ಮನೆ, ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡಬಾರದೆಂಬ ಸುಪ್ರೀಂಕೋರ್ಟ್, ಹೈಕೋರ್ಟ್ ಹಾಗೂ ಎನ್ ಜಿಟಿ ಆದೇಶವಿದ್ದರೂ ಇಂದಿನ ಶಾಸಕರು ಅಂದು ಬಡವರಿಗೆ ರಾಜ ಕಾಲುವೆಗಳ ಪಕ್ಕ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಸ್ಲಂ ಬೋರ್ಡ್ ನಿಂದ ನಿರ್ಮಿಸಿ ಕೊಟ್ಟಿರುವ ಕಳಪೆ ಮಟ್ಟದ ಭಾಗಶಃ ಮನೆಗಳ ಮೇಲ್ಛಾವಣಿ ಕುಸಿದು ಬಿದ್ದಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಪದೇ ಪದೇ ಮಳೆಯಿಂದಾಗಿ ಹಾನಿಗೊಳಗಾಗುತ್ತಿರುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಲೋಕೋಪಯೋಗಿ ಸಚಿವರಾದ ಸಿಸಿ ಪಾಟೀಲ್ ಅವರೊಂದಿಗೆ ಚರ್ಚಿಸಲಾಗಿದೆ.

ರಾಜಕಾಲುವೆಗಳನ್ನು ಶೀಘ್ರವೇ ಸ್ವಚ್ಚಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸ್ವಚ್ಚತಾ ಕಾರ್ಯ ನಡೆಸಿದ್ದಾರೆ. ಅವಳಿ ನಗರದಲ್ಲಿ ಮುಂಬರುವ ದಿನಗಳಲ್ಲಿ ವೈಜ್ಞಾನಿಕ ರಸ್ತೆ, ಚರಂಡಿ ಹಾಗೂ ಬಡವರಿಗೆ ಸುಸಜ್ಜಿತ ‌ಮನೆಗಳನ್ನು ನಿರ್ಮಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅನಿಲ್ ಮೆಣಸಿನಕಾಯಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯೆ ಲಕ್ಷ್ಮೀ ಕಾಕಿ, ಮಾಧುಸಾ ಮೇರವಾಡೆ, ಮುಖಂಡರಾದ ದೇವೇಂದ್ರಪ್ಪ ಗೋಟೂರ, ಮಂಜುನಾಥ ತಳವಾರ, ಅಮರೇಶ ಹಿರೇಮಠ, ಶಂಕರ್‌ ಕಾಕಿ, ನಿಂಗಪ್ಪ ದೊಡ್ಡಮನಿ, ಚಿನ್ನಪ್ಪ‌ ನೆಗಳೂರ, ಶಿವು ಗೋಟೂರ, ಲಕ್ಷ್ಮಣ ವಾಲ್ಮೀಕಿ, ಮಂಜುನಾಥ ಮಾದಗುಂಡಿ, ಮಾರುತಿ ಅಮರದ, ರಾಮಣ್ಣ ವಾಲ್ಮೀಕಿ, ರಮೇಶ್ ಕಾತರಕಿ, ಪ್ರಕಾಶ್ ತಳವಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here