ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ; ನವೆಂಬರ್ 3ಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಪ್ರಚಾರ ತೀವ್ರಗೊಂಡಿದೆ. ವಿವಿಧ ದೇಶಗಳ ಮೇಲೆ ಅಮೆರಿಕ ಪ್ರಭಾವ ಸಾಕಷ್ಟಿರುವುದರಿಂದ ಈ ಚುನಾವಣೆ ವಿಶ್ವದ ಇತರ ಭಾಗಗಳಲ್ಲೂ ಕುತೂಹಲಕ್ಕೆ ಕಾರಣವಾಗಿದೆ.
ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕ್ ಪಕ್ಷದ ಚಿಹ್ನೆ ಆನೆಗೆ ಡೆಮಾಕ್ರಟಿಕ್ ಪಕ್ಷದ ಚಿಹ್ನೆ ಕತ್ತೆ ಈ ಸಲ ಒದೆ ನೀಡಬಹುದೇ ಎಂಬ ಚರ್ಚೆ ಶುರುವಾಗಿದೆ. ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಬಯಸಿದ್ದರೆ, ಹಿಂದೊಮ್ಮೆ ಉಪಾಧ್ಯಕ್ಷರಾಗಿದ್ದ ಜೊ ಬಿಡೆನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧೆಯಲ್ಲಿದ್ದರೆ, ರಿಪಬ್ಲಿಕ್ ಪಕ್ಷದಿಂದ ಮೈಕ್ ಪೆನ್ಸೆ ಕಣದಲ್ಲಿದ್ದಾರೆ. ಟ್ರಂಪ್ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಮುಂದೆ ಇಟ್ಟುಕೊಂಡು, ಅಮೆರಿಕದಲ್ಲಿ ಶಾಂತಿ ನೆಲೆಸಲು ತಮ್ಮಿಂದ ಮಾತ್ರ ಸಾಧ್ಯ ಎಂದು ಪ್ರಚಾರ ಮಾಡುತ್ತಿದ್ದಾರೆ.
ಡೆಮಾಕ್ರಟಿಕ್ ಪಕ್ಷ ‘ಟ್ರಂಪ್ ಅಸಮರ್ಥ ನಾಯಕತ್ವ’ ವಿಷಯವನ್ನು ಮುಖ್ಯ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ಅಮೆರಿಕದಲ್ಲಿ ಇತ್ತೀಚೆಗೆ ಕಪ್ಪು ಜನಾಂಗದವರ ಮೇಲೆ ಹೆಚ್ಚಿರುವ ದೌರ್ಜನ್ಯದ ಸಂಗತಿಯೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎನ್ನಲಾಗಿದೆ.
ಈಗ ಅಲ್ಲಿ ಬ್ಲಾಂಕ್ ಲೈವ್ಸ್ ಮ್ಯಾಟರ್ ಎಂಬ ಅಭಿಯಾನವೂ ಶುರುವಾಗಿದ್ದು, ಟ್ರಂಪ್ ನೀತಿಗಳೇ ದೌರ್ಜನ್ಯಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಸಮೀಕ್ಷೆಗಳ ಪ್ರಕಾರ, ಸದ್ಯಕ್ಕೆ ಬಿಡೆನ್ ಟ್ರಂಪ್ ಗಿಂತ ಕೊಂಚ ಮುಂದಿದ್ದಾರೆ. ಹೀಗಾಗಿಕೊಬ್ಬಿದ ಆನೆಗೆ ಕತ್ತೆ ಒದೆ ಬೀಳಬಹುದು ಎನ್ನಲಾಗಿದೆ.