ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರೈತರಿಗೆ ಕಳಪೆ ಬೀಜ, ಗೊಬ್ಬರ ಪೂರೈಕೆ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಕೊಪ್ಪಳದಲ್ಲಿ ಶನಿವಾರ ಹಸಿರು ಸೇನೆ ಸಂಘಟನೆಯ ರೈತರು ಪ್ರತಿಭಟನೆ ನಡೆಸಿ, ಪಾಟೀಲ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 10 ರಂದು ಬೂದಗುಂಪಾ ರೈತನೊಬ್ಬ ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 50 ಕೆಜಿ ಗೊಬ್ಬರ ಖರೀದಿಸಿದ್ದಾನೆ. ಗೊಬ್ಬರವನ್ನು ಹೊಲಕ್ಕೆ ಹಾಕುವ ವೇಳೆ ಅನುಮಾನಗೊಂಡ ರೈತ ಅದನ್ನು ಪರೀಕ್ಷಿಸಿ ಪ್ರತಿ ಕೆಜಿಯಲ್ಲಿ 200 ಗ್ರಾಮನಷ್ಟು ಬೂದಿ ಮತ್ತು ಮಣ್ಣು ಕಂಡು ಬಂದಿದೆ. ಕೂಡಲೇ ರೈತ ಸಂಘಟನೆಯ ಮುಖಂಡರಿಗೆ ವಿಷಯ ತಿಳಿಸಿದ್ದು, ಗೊಬ್ಬರ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರನ್ನು, ಅಜ್ಞಾನಿ, ಅಯೋಗ್ಯ ಎಂದು ಜರಿದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಫಲಿತಾಂಶ ಬಂದ ನಂತರ ಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.