ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗದಗ ಶಾಖೆ ಇವರ ಸಹಯೋಗದಲ್ಲಿ ‘ಮಾದಕ ವಸ್ತು ಮುಕ್ತ ಕರ್ನಾಟಕ, ಎಲ್ಲರಿಗೂ ಆರೋಗ್ಯ ಮತ್ತು ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಧ್ಯೇಯವಾಕ್ಯಗಳನ್ನು ಜನತೆಯಲ್ಲಿ ಜಾಗೃತಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್-2026 ಸ್ಪರ್ಧೆಯಲ್ಲಿ ಬಸವ ಯೋಗ ಮಹಾವಿದ್ಯಾಲಯದ ಯೋಗಗುರು ಕೆ.ಎಸ್. ಪಲ್ಲೇದ ಭಾಗವಹಿಸಿ 5 ಕಿ.ಮೀ. ಅಂತರದ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಇದಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಅವರು ಕೆ.ಎಸ್. ಪಲ್ಲೇದರನ್ನು ಅಭಿನಂದಿಸಿ ಗೌರವಿಸಿದರು.
ಸ್ಪರ್ಧೆಯಲ್ಲಿ ಸಾರ್ವಜನಿಕರು, ಹಿರಿಯ ನಾಗರಿಕರು, ಕ್ರೀಡಾಪಟುಗಳು, ಇಲಾಖಾ ನೌಕರರು ಹಾಗೂ ಮಾಧ್ಯಮ ಮಿತ್ರರು ಭಾಗವಹಿಸಲು ಅವಕಾಶವಿತ್ತು.
ಸಂಘಟಕರು ಆಯೋಜಿಸಿದ ಈ ಕಾರ್ಯ ಯಶಸ್ಸಿಗಾಗಿ ಹಾಗೂ ತಾನು ಮಾಡಿದ ಯೋಗ ಸಾಧನೆಯ ಪರೀಕ್ಷೆಯ ದೃಷ್ಟಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಆದ್ದರಿಂದ ನೀವೂ ಯೋಗಾಭ್ಯಾಸ ಮಾಡಿ ದುಶ್ಚಟ, ದುರಭ್ಯಾಸಗಳಿಂದ ದೂರವಿದ್ದು ಆರೋಗ್ಯವಂತರಾಗಿರಿ ಎಂದು ಕೆ.ಎಸ್. ಪಲ್ಲೇದ ತಿಳಿಸಿದರು. ಕಾರ್ಯಕ್ರಮದ ಸಂಘಟಕರಿಗೆ ಅವರು ಅಭಿನಂದನೆ ಸಲ್ಲಿಸಿದರು.



