ಲಕ್ಷ್ಮೇಶ್ವರ: ಪ್ರಜಾಸೌಧ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ಕ್ರೀಡಾಂಗಣಕ್ಕೆ ಮೀಸಲಾದ ಜಾಗದ ಒಂದು ಇಂಚು ಕೂಡ ಕಡಿಮೆಯಾಗಬಾರದು ಎಂದು ಆಗ್ರಹಿಸಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಮಂಗಳವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಉಮಾ ವಿದ್ಯಾಲಯದ ಹಿಂಭಾಗದಲ್ಲಿರುವ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮೀಸಲಾದ ಕ್ರೀಡಾಂಗಣದ ಜಾಗದ ಪಕ್ಕದಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಮುಂದಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
“ಆಟದ ಮೈದಾನ ನಮ್ಮ ಹಕ್ಕು”, “ಕ್ರೀಡಾಂಗಣ ಉಳಿಸಿ” ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮೈದಾನದ ಜಾಗವನ್ನು ಒತ್ತುವರಿ ಮಾಡಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಶರಣು ಗೋಡಿ, ಸೋಮಣ್ಣ ಉಪನಾಳ ಹಾಗೂ ಬಸಣ್ಣ ಬೆಂಡಿಗೇರಿ, ತಾಲೂಕು ಕ್ರೀಡಾಂಗಣಕ್ಕೆ ಮೀಸಲಾದ 3.24 ಎಕರೆ ಜಾಗೆಯಲ್ಲಿ ಯಾವುದೇ ರೀತಿಯ ಕಡಿತ ಅಥವಾ ಒತ್ತುವರಿ ಆಗಬಾರದು. ಕ್ರೀಡಾ ಇಲಾಖೆಯ ಹೆಸರಿನಲ್ಲಿರುವ ಜಾಗೆಯನ್ನು ತಕ್ಷಣ ಸರ್ವೇ ಮಾಡಿ ಗಡಿ ಗುರುತಿಸಬೇಕು. ಇದೇ ಮೈದಾನದಿಂದ ನೂರಾರು ಕ್ರೀಡಾಪಟುಗಳು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಕ್ರೀಡಾಂಗಣವನ್ನು ಉಳಿಸುವುದು ಅಗತ್ಯ ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಧನಂಜಯ ಎಂ. ಅವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಕ್ರೀಡಾಂಗಣಕ್ಕೆ ಮೀಸಲಾದ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
2025ರಲ್ಲಿ ಪುರಸಭೆಗೆ ಸೇರಿದ 2.34 ಎಕರೆ ಭೂಮಿಯನ್ನು ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದ್ದು, ₹8.60 ಕೋಟಿ ವೆಚ್ಚದ ಕಾಮಗಾರಿಗೆ ಕರ್ನಾಟಕ ಹೌಸಿಂಗ್ ಬೋರ್ಡ್ಗೆ ಆದೇಶ ನೀಡಲಾಗಿದೆ. ಪ್ರಸ್ತುತ ಗುತ್ತಿಗೆದಾರರು ಲೈನ್ಔಟ್ ಹಾಗೂ ತಾತ್ಕಾಲಿಕ ಶೆಡ್ ನಿರ್ಮಾಣದ ಕೆಲಸ ಮಾತ್ರ ಮಾಡುತ್ತಿದ್ದಾರೆ. ಕ್ರೀಡಾಂಗಣದ ಜಾಗ ಒತ್ತುವರಿಯಾಗುವುದಿಲ್ಲ ಎಂದು ಭರವಸೆ ನೀಡಿದರು.
ಕ್ರೀಡಾ ಇಲಾಖೆಯಿಂದ ಮನವಿ ಬಂದ ತಕ್ಷಣ ಜಾಗದ ಸರ್ವೇ ನಡೆಸಿ ಗಡಿ ಗುರುತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಇದೇ ವೇಳೆ ಲಕ್ಷ್ಮೇಶ್ವರ ತಾಲೂಕು ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಜೆ.ಆರ್. ಕೊಪ್ಪದ ಮಾತನಾಡಿ, ಪ್ರಜಾಸೌಧ ನಿರ್ಮಾಣಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಸಚಿವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಭೂಮಿಪೂಜೆ ನಡೆಸದೆ ಕಾಮಗಾರಿ ಆರಂಭಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕ್ರೀಡಾಂಗಣದ ಜಾಗ ಹಾಗೂ ಅಲ್ಲಿನ ಗುಡಿಸಲು ನಿವಾಸಿಗಳ ಸಮಸ್ಯೆ ಬಗೆಹರಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.



