ಮಧುರೈ: ತಮಿಳುನಾಡಿನ ಐತಿಹಾಸಿಕ ಹಾಗೂ ಪ್ರಸಿದ್ಧ ಮಧುರೈ ಅರುಳ್ಮಿಗು ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನದ ಮಹಾ ಕುಂಭಾಭಿಷೇಕ ಮಹೋತ್ಸವ ಸೆಪ್ಟೆಂಬರ್ 17ರಂದು ವೈಭವದಿಂದ ನಡೆಯಲಿದೆ.
ಕುಂಭಾಭಿಷೇಕದ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಯಾಗಶಾಲೆ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ. ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ನೂತನವಾಗಿ ಬಣ್ಣ ಬಳಿಯಲಾಗಿದ್ದು, ದೇವಾಲಯದ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ.
ನವವಧುವಿನಂತೆ ಕಂಗೊಳಿಸುತ್ತಿರುವ ಗೋಪುರಗಳು:
ದೇವಾಲಯದ ಪ್ರಸಿದ್ಧ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ರಾಜಗೋಪುರಗಳಿಗೆ ನೂತನವಾಗಿ ಬಣ್ಣ ಬಳಿಯಲಾಗಿದೆ. ಮೀನಾಕ್ಷಿ ದೇವಿ ಸನ್ನಿಧಿಯ ಗೋಪುರಕ್ಕೂ ಹೊಸ ಬಣ್ಣ ಬಳಿದು ಅಲಂಕರಿಸಲಾಗಿದೆ.
ರಾತ್ರಿಯ ವೇಳೆ ಎಲ್ಲಾ ಗೋಪುರಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತರು ಹಾಗೂ ಪ್ರವಾಸಿಗರ ಗಮನ ಸೆಳೆಯುತ್ತಿವೆ.
ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಈ ಬೃಹತ್ ಕುಂಭಾಭಿಷೇಕ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.



