ಚಿಕ್ಕಮಗಳೂರು: ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಲುಕಿದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಸಮೀಪದ ತೇಗೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಸೈಯದ್ ಗಲ್ಲಿ ನಿವಾಸಿ ಮಹಮ್ಮದ್ ಗೌಸ್ ಖಾನ್ (36) ಮೃತರು. ಅವರು ಪತ್ನಿಯೊಂದಿಗೆ ಸ್ಕೂಟರ್ನಲ್ಲಿ ತೇಗೂರು ಗ್ರಾಮದಿಂದ ಚಿಕ್ಕಮಗಳೂರು ನಗರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಟ್ರ್ಯಾಕ್ಟರ್ಗೆ ಮರದ ದಿಮ್ಮಿಗಳನ್ನು ಎಳೆದು ಲೋಡ್ ಮಾಡಲು ರಸ್ತೆಗೆ ಅಡ್ಡಲಾಗಿ ಹಗ್ಗ ಕಟ್ಟಲಾಗಿತ್ತು ಎನ್ನಲಾಗಿದೆ. ಹಗ್ಗ ಕಾಣಿಸದ ಕಾರಣ ಅದು ಗೌಸ್ ಖಾನ್ ಅವರ ಕುತ್ತಿಗೆಗೆ ಸಿಲುಕಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲೂ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಲ್ಯಾಬ್ ಟೆಕ್ನಿಷಿಯನ್ ಮೃತಪಟ್ಟಿದ್ದರು. ಇದೀಗ ಮತ್ತೊಂದು ದುರಂತ ಸಂಭವಿಸಿರುವುದು ರಸ್ತೆ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.








