ರಾಮನಗರ: ರಾಮನಗರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರು ಆಕರ್ಷಕ ಪಥಸಂಚಲನ ನಡೆಸಿದರು.
ಸಂಘದ ಕಚೇರಿಯಿಂದ ಆರಂಭವಾದ ಪಥಸಂಚಲನವು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಂಪ್ರದಾಯಿಕ ಸಮವಸ್ತ್ರ ಧರಿಸಿದ್ದ ನೂರಾರು ಕಾರ್ಯಕರ್ತರು ಸುಮಾರು 3 ಕಿಲೋಮೀಟರ್ಗೂ ಹೆಚ್ಚು ದೂರ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಪಥಸಂಚಲನವು ರಾಯರದೊಡ್ಡಿ ಸರ್ಕಲ್, ಕೆಂಪೇಗೌಡ ಸರ್ಕಲ್, ಮಾಗಡಿ ರಸ್ತೆ, ಐಜೂರು ಸರ್ಕಲ್, ಹಳೇ ಬಸ್ ನಿಲ್ದಾಣ ಹಾಗೂ ಎಂ.ಜಿ. ರಸ್ತೆ ಮಾರ್ಗವಾಗಿ ಸಾಗಿ, ಕೊನೆಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು.
ಪಥಸಂಚಲನ ವೀಕ್ಷಿಸಿದ ಸಾರ್ವಜನಿಕರು:
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಥಸಂಚಲನವನ್ನು ರಸ್ತೆ ಬದಿಯಲ್ಲಿ ನಿಂತಿದ್ದ ಸ್ಥಳೀಯರು ವೀಕ್ಷಿಸಿದರು. ಪಥಸಂಚಲನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.
ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಚಾರ ವ್ಯವಸ್ಥೆಯ ಮೇಲೆಯೂ ನಿಗಾ ಇರಿಸಲಾಗಿತ್ತು.








