ಬೆಂಗಳೂರು: ಬೈಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ದೇಹಕ್ಕೆ ಗೋಣಿ ಚೀಲ ಕಟ್ಟಿಕೊಂಡು, ಕುತ್ತಿಗೆಗೆ ‘ಭಿಕ್ಷೆ ನೀಡಿ’ ಎಂಬ ಫಲಕ ಹಾಕಿಕೊಂಡು, ಕೈಯಲ್ಲಿ ಪಾತ್ರೆ ಹಿಡಿದು ಭಿಕ್ಷಾಟನೆ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಕನಕಪುರ ರಸ್ತೆಯ ಉದಯಪುರದಿಂದ ಸೋಮನಹಳ್ಳಿ ಟೋಲ್ವರೆಗೆ ಬೈಪಾಸ್ ನಿರ್ಮಿಸಬೇಕು ಎಂಬುದು ನಿವಾಸಿಗಳ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಭಿಕ್ಷಾಟನೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು NHAIಗೆ ನೀಡಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.
ಅಪಘಾತದಲ್ಲಿ ನಾಲ್ವರ ಸಾವು: ನಿವಾಸಿಗಳ ಆತಂಕ:
ಕಳೆದ ಒಂದು ತಿಂಗಳ ಅವಧಿಯಲ್ಲಿ ಅಪಘಾತಗಳಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ರಸ್ತೆಯಲ್ಲಿನ ಅಪಘಾತಗಳ ಆತಂಕದ ಹಿನ್ನೆಲೆಯಲ್ಲಿ ಬೈಪಾಸ್ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.










