ಬೀದರ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ 15 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬೆಂಕಿಗಾಹುತಿಯಾದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಓತಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಗೋವಿಂದ ಬೀರಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಈ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಭಸ್ಮವಾಗಿದೆ. ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಣ್ಣೆದುರೇ ನಾಶವಾಗಿರುವುದರಿಂದ ರೈತರಿಗೆ ಭಾರಿ ನಷ್ಟ ಉಂಟಾಗಿದೆ.
ಕಬ್ಬಿನ ಜಮೀನಿನಲ್ಲಿ ಬೆಂಕಿ ವೇಗವಾಗಿ ಹರಡಿದ್ದರಿಂದ ಇಡೀ ಬೆಳೆ ಧಗಧಗನೆ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಬ್ಬು ಬಹುತೇಕ ಸಂಪೂರ್ಣವಾಗಿ ಸುಟ್ಟುಹೋಗಿತ್ತು.
ಘಟನೆಯ ಮಾಹಿತಿ ತಿಳಿದು ಶಾಸಕ ಸಿದ್ದು ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ನಷ್ಟ ಅನುಭವಿಸಿದ ರೈತನಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದೇ ವೇಳೆ, ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕರು, ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ತಕ್ಷಣ ದುರಸ್ತಿಪಡಿಸುವಂತೆ ನಿರ್ದೇಶನ ನೀಡಿದರು. ಬೆಂಕಿಯಿಂದ ಭಾಗಶಃ ಉಳಿದಿರುವ ಕಬ್ಬನ್ನು ಕಟಾವು ಮಾಡಿ ಸಾಗಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಸೂಚನೆ ನೀಡಿದರು.










