ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ರಂಪಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕ್ಲೀನ್ಚಿಟ್ ನೀಡಲಾಗಿದೆ.
ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ಸಿಸಿಎಫ್ ಹನುಮಂತಪ್ಪ ನೇತೃತ್ವದ ಆಂತರಿಕ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ಸೋಮಣ್ಣ ಆನೆ ರಂಪಾಟ ನಡೆಸಿದ ಘಟನೆ ಕುರಿತು ತನಿಖೆ ನಡೆಸಿದ ಅಧಿಕಾರಿಗಳು, ಆನೆಯ ವರ್ತನೆಯೇ ಘಟನೆಗೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ವರದಿಯ ಪ್ರಕಾರ, ಸರ್ಕಾರದಿಂದ ಅನುಮತಿ ದೊರೆತ ಮರುದಿನದಿಂದಲೇ ಅಂಬಾರಿ ಹೊರಲು ಆಯ್ಕೆಯಾದ ಆನೆಗಳಿಗೆ ತಾಲೀಮು ಆರಂಭಿಸಲಾಗಿತ್ತು. ಪ್ರತಿದಿನ ಸುಮಾರು ನಾಲ್ಕು ಕಿಲೋಮೀಟರ್ ದೂರ ನಡೆಸಿ ತರಬೇತಿ ನೀಡಲಾಗಿತ್ತು. ಆನೆಗಳಿಗೆ ಪೌಷ್ಟಿಕ ಆಹಾರವನ್ನೂ ಒದಗಿಸಲಾಗಿತ್ತು.
ದಸರಾ ಮೆರವಣಿಗೆಯ ವೇಳೆ ಎದುರಾಗುವ ಪಟಾಕಿಗಳ ಸದ್ದು, ಜನಸಂದಣಿ ಹಾಗೂ ವಾಹನಗಳ ಶಬ್ದಕ್ಕೆ ಆನೆಗಳು ಹೊಂದಿಕೊಳ್ಳುವಂತೆ ತರಬೇತಿ ನೀಡಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೂರು ಆನೆಗಳಿಗೂ ಸಮಾನವಾಗಿ ತರಬೇತಿ ನೀಡಲಾಗಿತ್ತು. ಪಶುವೈದ್ಯರು, ಮಾವುತರು ಹಾಗೂ ಅನುಭವ ಹೊಂದಿರುವ ನಿವೃತ್ತ ಜಮೇದಾರ್ ಸೇರಿದಂತೆ ಅಧಿಕಾರಿಗಳ ತಂಡ ಚರ್ಚಿಸಿ ಸೋಮಣ್ಣ ಆನೆಯನ್ನು ಅಂಬಾರಿ ಹೊರಲು ಆಯ್ಕೆ ಮಾಡಿತ್ತು.
ಆನೆಗಳ ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದಿಲ್ಲ ಎಂಬುದು ತನಿಖಾ ವರದಿಯ ಸಾರಾಂಶವಾಗಿದೆ. ಹೀಗಾಗಿ, ಸೋಮಣ್ಣ ಆನೆ ರಂಪಾಟ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿಲ್ಲ ಎಂದು ವರದಿ ತಿಳಿಸಿದೆ.










