ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದ ದರ, ವಿತರಿಸಲಾಗುವ ಸಾಮಗ್ರಿಗಳು ಹಾಗೂ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯುಳ್ಳ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವ ಅಂಗಡಿಗಳಲ್ಲಿ ಮುಖ್ಯಮಂತ್ರಿ ಅವರ ಭಾವಚಿತ್ರ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಹಾಗೂ ದರಪಟ್ಟಿ ಒಳಗೊಂಡ ಫಲಕ ಅಳವಡಿಸಬೇಕು. ಯಾವುದೇ ಅಂಗಡಿಯಲ್ಲಿ ಫಲಕ ಅಥವಾ ದರಪಟ್ಟಿ ಇಲ್ಲದಿದ್ದರೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಎಲ್ಲ ಅಂಗಡಿಗಳಲ್ಲೂ ಅಗತ್ಯ ಫಲಕ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳುವಾಗ ಲೈನ್ಮನ್ಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ವಿದ್ಯುತ್ ಕಂಬ, ಲೈನ್ ದುರಸ್ತಿ ಸೇರಿದಂತೆ ಅಪಾಯಕಾರಿ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಬಳಸಿಕೊಳ್ಳಬಾರದು. ತರಬೇತಿ ಪಡೆದ ಲೈನ್ಮನ್ಗಳೇ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಹಿಂದೆ ಕೆಇಬಿ ಕಾಮಗಾರಿ ವೇಳೆ ಲೈನ್ಮನ್ಗಳ ನಿರ್ಲಕ್ಷ್ಯದಿಂದ ಮೂವರು ಸಾರ್ವಜನಿಕರು ಮೃತಪಟ್ಟಿರುವ ಘಟನೆಗಳು ನಡೆದಿವೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಬಂಧಿಸಿದ ಲೈನ್ಮನ್ ಹಾಜರಿದ್ದು ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ನಗರ ವಾರ್ಡ್ಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಆರು ಸದಸ್ಯರ ಸಮಿತಿ ರಚಿಸಿ ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದರು. ಯುವನಿಧಿ ಫಲಾನುಭವಿಗಳಿಗೆ ಮೂರು ತಿಂಗಳ ತರಬೇತಿ ನೀಡಲು ವೇಳಾಪಟ್ಟಿ ಸಿದ್ಧಪಡಿಸುವಂತೆ ತಿಳಿಸಿದರು. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ, ಬಸ್ಗಳನ್ನು ಮಾಸಿಕ ಡೀಪ್ ಕ್ಲೀನ್ ಮಾಡುವುದರ ಜೊತೆಗೆ ಸುತ್ತಮುತ್ತ ತಂಬಾಕು ಮುಕ್ತ ಪ್ರದೇಶವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸುಧೀರ ಎಸ್. ಬೋಳಾರ, ಮುರಗಯ್ಯಾ ವಿರಕ್ತಮಠ, ರತ್ನಾ ತೇಗೂರಮಠ, ರೇಹನ್ ರಝಾ ಐನಾಪೂರಿ, ಶಾಂತಪ್ಪ ಎಸ್. ಅಕ್ಕಿ, ಸದಸ್ಯರಾದ ಅರವಿಂದ ಏಗನಗೌಡರ, ಬಸಪ್ಪ ಮಹಾಬಲೇಶ್ವರ ಬಾವಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯುತ್ ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರನ್ನು ಬಳಸಿಕೊಳ್ಳುವುದರಿಂದ ಅವರ ಜೀವಕ್ಕೆ ಅಪಾಯ ಉಂಟಾಗಬಹುದು. ಪ್ರತಿಯೊಂದು ಕಾಮಗಾರಿಯನ್ನೂ ತರಬೇತಿ ಪಡೆದ ಲೈನ್ಮನ್ಗಳೇ ನಿರ್ವಹಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.
— ಎಸ್.ಆರ್. ಪಾಟೀಲ, ಅಧ್ಯಕ್ಷ, ಜಿಲ್ಲಾ ಅನುಷ್ಠಾನ ಪ್ರಾಧಿಕಾರ
ಪಂಚ ಗ್ಯಾರಂಟಿಗಳ ಪ್ರಗತಿ
ಯುವನಿಧಿ: 13,215 ಅರ್ಜಿಗಳು ಸ್ವೀಕೃತಿ; 11,886 ಫಲಾನುಭವಿಗಳಿಗೆ ₹36.66 ಕೋಟಿ ಡಿಬಿಟಿ ಮೂಲಕ ಜಮೆ
ಶಕ್ತಿ: 43.78 ಕೋಟಿ ಮಹಿಳೆಯರಿಂದ ಉಚಿತ ಪ್ರಯಾಣ; ₹966.57 ಕೋಟಿ ಸರ್ಕಾರದಿಂದ ಬಿಡುಗಡೆ
ಗೃಹಜ್ಯೋತಿ: 5,73,052 ಫಲಾನುಭವಿಗಳು; ₹825.27 ಕೋಟಿ ಬಿಡುಗಡೆ
ಗೃಹಲಕ್ಷ್ಮಿ: 3,77,301 ಫಲಾನುಭವಿಗಳಿಗೆ ₹2,345.74 ಕೋಟಿ ಬಿಡುಗಡೆ
ಅನ್ನಭಾಗ್ಯ: 3,75,996 ಫಲಾನುಭವಿಗಳು



