ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಧೂಳು ಮತ್ತು ಕಸದ ಸಮಸ್ಯೆಗೆ ಕಡಿವಾಣ ಹಾಕಲು ನಗರ ಪಾಲಿಕೆಗಳು ತಂತ್ರಜ್ಞಾನದ ಮೊರೆ ಹೋಗಿವೆ.
ಬೆಂಗಳೂರು ದಕ್ಷಿಣ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳನ್ನು ಸ್ವಚ್ಛಗೊಳಿಸಲು ಅತ್ಯಾಧುನಿಕ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಫೀಲ್ಡ್ ಟ್ರಯಲ್ ಮತ್ತು ತಾಂತ್ರಿಕ ಮೌಲ್ಯಮಾಪನ ನಡೆಯುತ್ತಿದೆ.
ಕ್ಯಾಬಿನೆಟ್ ಅನುಮೋದನೆಯಂತೆ ಒಟ್ಟು 48 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.
ಈಗಾಗಲೇ ಔಟರ್ ರಿಂಗ್ ರೋಡ್, ವೈಟ್‌ಫೀಲ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳಲ್ಲಿ ಯಂತ್ರಗಳ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ. ಜಯನಗರದ ಸೌತ್ ಎಂಡ್ ಸರ್ಕಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಾಂತ್ರಿಕ ಮೌಲ್ಯಮಾಪನ ತಂಡ ಸ್ಥಳ ಪರಿಶೀಲನೆ ನಡೆಸಿದೆ.
5 ದಿನಗಳ ಕಾಲ ತಾಂತ್ರಿಕ ಪರೀಕ್ಷೆ:
ಪ್ರಾಯೋಗಿಕ ಪರೀಕ್ಷೆಯನ್ನು ಒಟ್ಟು 5 ದಿನಗಳ ಕಾಲ ನಡೆಸಲಾಗುತ್ತಿದ್ದು, ಯಂತ್ರಗಳ ಸಾಮರ್ಥ್ಯ, ಕಾರ್ಯಕ್ಷಮತೆ ಹಾಗೂ ರಸ್ತೆ ಸ್ವಚ್ಛತೆಯಲ್ಲಿ ಅವುಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಲಾಗುತ್ತಿದೆ.
ಈ ಯಂತ್ರಗಳ ಬಳಕೆಯಿಂದ ಪ್ರಮುಖ ರಸ್ತೆಗಳಲ್ಲಿ ಧೂಳು, ಕಸ ಹಾಗೂ ರಸ್ತೆ ಬದಿಯ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ತೆರವುಗೊಳಿಸಲು ಸಾಧ್ಯವಾಗಲಿದೆ. ಯೋಜನೆ ಸಂಪೂರ್ಣವಾಗಿ ಜಾರಿಗೆ ಬಂದರೆ ದಕ್ಷಿಣ ಮತ್ತು ಉತ್ತರ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಧೂಳಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ಸಾರ್ವಜನಿಕ ಆರೋಗ್ಯಕ್ಕೂ ಅನುಕೂಲ:
ರಸ್ತೆಗಳಲ್ಲಿ ಧೂಳಿನ ಪ್ರಮಾಣ ಕಡಿಮೆಯಾಗುವುದರಿಂದ ವಾಯು ಗುಣಮಟ್ಟ ಸುಧಾರಿಸುವುದರ ಜತೆಗೆ ಸಾರ್ವಜನಿಕ ಆರೋಗ್ಯಕ್ಕೂ ಅನುಕೂಲವಾಗಲಿದೆ. ಸ್ವಚ್ಛ ರಸ್ತೆಗಳು ವಾಹನ ಸಂಚಾರಕ್ಕೂ ಮತ್ತಷ್ಟು ಅನುಕೂಲ ಕಲ್ಪಿಸಲಿವೆ.
ಬೆಳೆಯುತ್ತಿರುವ ಬೆಂಗಳೂರಿನ ರಸ್ತೆ ಸ್ವಚ್ಛತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸುವ ಅಗತ್ಯವಿದ್ದು, ಪ್ರಸ್ತುತ ನಡೆಯುತ್ತಿರುವ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಪರೀಕ್ಷೆ ಯಶಸ್ವಿಯಾದರೆ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಲು ಇದು ಮಹತ್ವದ ಹೆಜ್ಜೆಯಾಗಲಿದೆ.



