ವಾಷಿಂಗ್ಟನ್: ಅಮೆರಿಕದಲ್ಲಿ ದೇಶೀಯ ಔಷಧ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಹೊಸ ಸುಂಕ ನೀತಿಯನ್ನು ಘೋಷಿಸಿದ್ದಾರೆ. ಹಂತಹಂತವಾಗಿ ಜಾರಿಗೆ ಬರಲಿರುವ ಈ ನೀತಿಯ ಪ್ರಕಾರ, 2028ರ ಬಳಿಕ ಆಮದು ಔಷಧಿಗಳ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸಲಾಗುತ್ತದೆ.
ಟ್ರಂಪ್ ಅವರು ತಮ್ಮ Truth Social ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಔಷಧ ಕಂಪನಿಗಳು ಅಮೆರಿಕದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಈ ನೀತಿ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದ್ದಾರೆ. ವಿದೇಶಿ ಆಮದು ಅವಲಂಬನೆ ಕಡಿಮೆ ಮಾಡಿ ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ನೀತಿಯ ಪ್ರಕಾರ, 2026ರ ಆಗಸ್ಟ್ 1ರಿಂದ ಮುಂದಿನ ಎರಡು ವರ್ಷಗಳವರೆಗೆ ಜೆನೆರಿಕ್ ಔಷಧಿಗಳ ಆಮದಿಗೆ ಯಾವುದೇ ಹೆಚ್ಚುವರಿ ಸುಂಕ ವಿಧಿಸಲಾಗುವುದಿಲ್ಲ. ಆದರೆ 2028ರಿಂದ ಒಂದು ವರ್ಷದವರೆಗೆ 100 ಶೇಕಡಾ ಸುಂಕ ಜಾರಿಗೆ ಬರಲಿದ್ದು, ಅದರ ಬಳಿಕ 200 ಶೇಕಡಾ ಸುಂಕ ವಿಧಿಸಲಾಗುತ್ತದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ನಿಗದಿತ ಅವಧಿಯೊಳಗೆ ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸದ ಕಂಪನಿಗಳಿಗೆ ಈ ಹೆಚ್ಚುವರಿ ಸುಂಕ ದಂಡದ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈಗಾಗಲೇ ಅಮೆರಿಕದ ವಿವಿಧ ಭಾಗಗಳಲ್ಲಿ ಹೊಸ ಔಷಧ ಉತ್ಪಾದನಾ ಘಟಕಗಳ ನಿರ್ಮಾಣ ಆರಂಭವಾಗಿದ್ದು, ಈ ಕ್ರಮದಿಂದ ದೇಶೀಯ ಉತ್ಪಾದನೆ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಬಳಕೆಯಾಗುವ ಔಷಧಿಗಳಲ್ಲಿ 90 ಶೇಕಡಕ್ಕೂ ಹೆಚ್ಚು ಜೆನೆರಿಕ್ ಔಷಧಿಗಳೇ ಇರುವ ಹಿನ್ನೆಲೆಯಲ್ಲಿ, ಈ ಹೊಸ ಸುಂಕ ನೀತಿ ಜಾಗತಿಕ ಔಷಧ ಉದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುವ ಭಾರತದ ಔಷಧ ಕಂಪನಿಗಳ ಮೇಲೆ ಇದರ ಪರಿಣಾಮ ಉಂಟಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.



