ಬೆಂಗಳೂರು: ಕರ್ನಾಟಕದ ಐಟಿ-ಬಿಟಿ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನಿರಾಕರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯವ್ಯಾಪಿ ಬೃಹತ್ ಅಭಿಯಾನಕ್ಕೆ ಮುಂದಾಗಿದೆ.
ನವೆಂಬರ್ 1ರಿಂದ 30ರವರೆಗೆ ಕನ್ನಡಿಗರ ಉದ್ಯೋಗ ಹಕ್ಕಿಗಾಗಿ ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಘೋಷಿಸಿದ್ದಾರೆ. ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಐಟಿ-ಬಿಟಿ ಕಂಪನಿಗಳು ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗಾವಕಾಶಗಳನ್ನು ನೀಡಲಾಗಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲು ಕರವೇ ನಿರ್ಧರಿಸಿದೆ. ಅಭಿಯಾನದ ಭಾಗವಾಗಿ ಸಂಘಟನೆಯ ತಂಡಗಳು ವಿವಿಧ ಕಂಪನಿಗಳಿಗೆ ಭೇಟಿ ನೀಡಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರ ಸಂಖ್ಯೆ ಹಾಗೂ ಉದ್ಯೋಗಾವಕಾಶಗಳ ಕುರಿತು ಅಂಕಿ-ಅಂಶಗಳನ್ನು ಕಲೆಹಾಕಲಿವೆ.
ಸಂಗ್ರಹಿಸಿದ ಮಾಹಿತಿಯನ್ನು ವರದಿ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಂಪನಿಗಳು ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ನಿರಾಕರಿಸಿದರೆ ಅಂತಹ ಸಂಸ್ಥೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಿ ಇಲ್ಲಿನ ಮೂಲಸೌಕರ್ಯಗಳು ಹಾಗೂ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವ ಕಂಪನಿಗಳು ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಆದರೆ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಪರಿಚಯ ಪತ್ರ ಸಲ್ಲಿಸಿದ ಕಾರಣಕ್ಕೆ ಅಥವಾ ಕನ್ನಡಿಗರೆಂದು ತಿಳಿದ ತಕ್ಷಣ ಉದ್ಯೋಗಾವಕಾಶ ನಿರಾಕರಿಸುವ ಘಟನೆಗಳು ನಡೆಯುತ್ತಿವೆ. ಇಂತಹ ತಾರತಮ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕಕ್ಕೆ ಬಂದು ಇಲ್ಲಿನ ಮೂಲಸೌಕರ್ಯಗಳನ್ನು ಬಳಸಿಕೊಂಡು, ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುವುದು ಸರಿಯಲ್ಲ. ನಾವು ಯಾವುದೇ ಷೇರು ಅಥವಾ ಲಾಭ ಕೇಳುತ್ತಿಲ್ಲ. ನಮ್ಮ ನೆಲದಲ್ಲಿ ನಮಗೆ ಉದ್ಯೋಗ ಕೊಡಿ ಎಂದು ಕೇಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಡಾ. ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ನಾರಾಯಣಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ವಿಚಾರ ಕೇವಲ ಭರವಸೆಯಾಗಿ ಉಳಿಯಬಾರದು. ಅದಕ್ಕೆ ಕಾನೂನಿನ ಬಲ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ನಾರಾಯಣಗೌಡ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇವಲ ಕನ್ನಡ ಧ್ವಜ ಹಾರಿಸಿ, ಸಿದ್ಧಪಡಿಸಿದ ಭಾಷಣ ಓದುವುದರಿಂದ ಕನ್ನಡಿಗರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕನ್ನಡಿಗರು ಸರ್ಕಾರದ ಮೇಲೆ ಭರವಸೆ ಇಟ್ಟಿದ್ದಾರೆ. ಅವರ ಉದ್ಯೋಗದ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮೀಸಲಾತಿ ಕೇಳುತ್ತಿಲ್ಲ. ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಬೇಕು. ಉದ್ಯಮಿಗಳ ಒತ್ತಡ ಅಥವಾ ಬೆದರಿಕೆಗೆ ಸರ್ಕಾರ ಮಣಿಯಬಾರದು ಎಂದು ನಾರಾಯಣಗೌಡ ಒತ್ತಾಯಿಸಿದ್ದಾರೆ.









