ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್, ತಮ್ಮ ಪುತ್ರ ವಿನೀಶ್ ಅವರ 18ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಉಡುಗೊರೆ ನೀಡಿರುವ ವಿಚಾರ ಗಮನ ಸೆಳೆದಿದೆ.
ಜೈಲಿನಲ್ಲಿರುವ ದರ್ಶನ್ ಮಗನಿಗೆ ಚಾಕೊಲೇಟ್ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಎಂದು ವರದಿಯಾಗಿದೆ. ತಂದೆಯಿಂದ ಸಿಕ್ಕ ಈ ಉಡುಗೊರೆಗೆ ವಿನೀಶ್ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.
ನಟ ದರ್ಶನ್ ಅವರ ಪುತ್ರ ವಿನೀಶ್ ಇಂದು 18ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ತಂದೆಯಿಂದ ಸಿಕ್ಕ ಚಾಕೊಲೇಟ್ ವಿನೀಶ್ ಅವರಿಗೆ ಅತ್ಯಂತ ಅಮೂಲ್ಯ ಉಡುಗೊರೆಯಾಗಿ ಪರಿಣಮಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬ ತಂದೆ ಮತ್ತು ಮಗನ ಪಾಲಿಗೆ ಭಾವನಾತ್ಮಕ ಕ್ಷಣವಾಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ತಂದೆ ನೀಡಿದ ಚಾಕೊಲೇಟ್ ಉಡುಗೊರೆಯ ಬಗ್ಗೆ ವಿನೀಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.
‘ಪ್ರಪಂಚದಲ್ಲಿ ಈ ಗಿಫ್ಟ್ಗಿಂತ ದೊಡ್ಡದು ಯಾವುದೂ ಇಲ್ಲ. ಥ್ಯಾಂಕ್ಸ್ ಅಪ್ಪ’ ಎಂದು ಬರೆದುಕೊಂಡು ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ವಿನೀಶ್ ಅವರ ಈ ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.









